ಸಿರವಾರ : ತಾಲೂಕಿನ ಚಾಗಭಾವಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ – ನಗರಾಭಿವೃದ್ಧಿ ಕೋಶ, ರಾಯಚೂರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ರಾಯಚೂರು ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯ, ಚಾಗಭಾವಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ಸಮನ್ವಯ ಸಭೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಕಲ್ಪ ವಿಕಲಚೇತನರ ಒಕ್ಕೂಟದ ಗೌರವಾಧ್ಯಕ್ಷರಾದ ದೇಸಾಯಿ ದೊತರಬಂಡಿ ಅವರು, ವಿಶ್ವ ವಿಕಲಚೇತನರ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ವಿಕಲಚೇತನರ ಬಗ್ಗೆ ಸಮಾಜದಲ್ಲಿ ಬಳಸಲಾಗುವ ಅವಮಾನಕಾರಿ ಹಾಗೂ ನೋವುಂಟುಮಾಡುವ ಪದಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಅವರು ಮನವಿ ಮಾಡಿದರು. ವಿಕಲಚೇತನರು ಸಹ ಸಮಾನ ಗೌರವ, ಹಕ್ಕು ಹಾಗೂ ಅವಕಾಶಗಳಿಗೆ ಅರ್ಹರಾಗಿದ್ದು, ಗೌರವಪೂರ್ಣ ಭಾಷೆ ಮತ್ತು ಮಾನವೀಯ ವರ್ತನೆಯೇ ನಿಜವಾದ ಸಬಲೀಕರಣಕ್ಕೆ ದಾರಿ ಎಂದು ತಿಳಿಸಿದರು.
ಸಮನ್ವಯ ಸಭೆಯಲ್ಲಿ ವಿಕಲಚೇತನರ ಹಕ್ಕುಗಳು, ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ಪುನರ್ವಸತಿ ಕ್ರಮಗಳು, ಸಾಮಾಜಿಕ ಒಗ್ಗಟ್ಟು ಹಾಗೂ ಜಾಗೃತಿ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ವಿಕಲಚೇತನರನ್ನು ಕೇವಲ ಸಹಾನುಭೂತಿಯಿಂದ ಅಲ್ಲ, ಗೌರವ ಮತ್ತು ಸಮಾನತೆಯ ದೃಷ್ಟಿಯಿಂದ ನೋಡುವ ಮನೋಭಾವ ಸಮಾಜದಲ್ಲಿ ಬೆಳೆಸಬೇಕೆಂಬ ಸಂದೇಶವನ್ನು ಕಾರ್ಯಕ್ರಮ ನೀಡಿತು.
ಈ ಸಂದರ್ಭದಲ್ಲಿ ಪಂಚಾಯತಿ ಕರ ವಸಲಿಗಾರರಾದ ಮಲ್ಲಯ್ಯ, ಸಂಕಲ್ಪ ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಚಲ್ಮಲ್, ಹೊಸಬೆಳಕು ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಗಾಯತ್ರಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮಲ್ಲಿಕಾರ್ಜುನ, ಸಿರವಾರ ಪಟ್ಟಣ ಪಂಚಾಯಿತಿ ನಗರ ಪುನರ್ವಸತಿ ಕಾರ್ಯಕರ್ತರು ಸೇರಿದಂತೆ ಅನೇಕ ವಿಕಲಚೇತನ ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು

