ಕಂಪ್ಲಿ: “ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಬದುಕು. ನಮ್ಮ ತಾಯಿನುಡಿಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಬಳ್ಳಾರಿ ಜಿಲ್ಲೆ ಕನ್ನಡ ಹಿತರಕ್ಷಕ ಸಂಘವು ಶ್ಲಾಘನೀಯ ಕೆಲಸ ಮಾಡುತ್ತಿದೆ. ಈ ಬಾರಿಯ 71ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 56ನೇ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ತಾಲೂಕಿನ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ವಿವಿಧ ರಂಗಗಳ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿರುವುದು ಇಡೀ ಕಂಪ್ಲಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ,” ಎಂದು ಕಂಪ್ಲಿ ವ ಕ್ಷೇತ್ರದ ಶಾಸಕರಾದ ಜೆ.ಎ.ನ್. ಗಣೇಶ್ ಹೇಳಿದರು.
ಸಣಾಪುರ ರಸ್ತೆಯ ವೀರಶೈವ ಸಂಘದ ಆವರಣದಲ್ಲಿ ಶನಿವಾರ ಜರುಗಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಹಾಗೂ ಆಂಗ್ಲ ಭಾಷೆಯ ವಿಷಯದಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿವಿಧ ರಂಗಗಳ ಸಾಧಕರಾದ ನೃತ್ಯ ಸಂಯೋಜಕ ಎಂ.ಎಸ್.ಮುನ್ನ, ಕುಸ್ತಿ ಪಟು ಇದಂಗಿ ಹುಲುಗಪ್ಪ, ಚಲನಚಿತ್ರ ನಿರ್ಮಾಪಕ ಶಂಕರ ಮೆಟ್ರಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎನ್. ಹುಸೇನ್ ಭಾಷ (ತಾಷಾರಾಂಡೋಲ್), ಸಾವಯವ ಕೃಷಿಕ ಎಂ.ಎಂ.ಬಸವರಾಜ, ರೈಫಲ್ ಶೂಟಿಂಗ್ ತರಬೇತುದಾರ ಸಿ.ಚಿನ್ನರಾಜು, ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ರವಿಶಂಕರ್, ಯೋಗ ಉಪನ್ಯಾಸಕ ಡಿ.ಮಹೇಶ್ ಬಾಬು, ಯೋಗ ತರಬೇತುದಾರರಾದ ಡಿ.ಮೌನೇಶ್, ನಾಗಪ್ಪ ಕಂಬಳಿ ಹಾಗೂ ಸಾಮಾಜಿಕ ಸಾಧಕ ಕಾಲಿಂಗವರ್ಧನ ಹಾದಿಮನಿ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ, ಇತಿಹಾಸ ಸಂಶೋಧಕ ಹಾಗೂ ಉಪನ್ಯಾಸಕ ಶರಣಬಸಪ್ಪ ಕೋಲ್ಕಾರ್, ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಮತ್ತು ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಬೂದುಗುಂಪಿ ಅಂಬಣ್ಣ, ಕಾರ್ಯದರ್ಶಿ ಸಿ.ಯಂಕಪ್ಪ, ಗೌರವ ಅಧ್ಯಕ್ಷ ಕ.ಮ.ಹೇಮಯ್ಯ ಸ್ವಾಮಿ, ಖಜಾಂಚಿ ಮಾ. ಶ್ರೀನಿವಾಸ ಹಾಗೂ ಪದಾಧಿಕಾರಿಗಳಾದ ಕೆ. ಮೆಹಬೂಬ್, ಬಂಗಿ ದೊಡ್ಡ ಮಂಜುನಾಥ, ಅಂಬಿಗರ ಮಂಜುನಾಥ, ಶಾಮ್ ಸುಂದರ್, ಇಂದ್ರಜಿತ್ ಸಿಂಗ್ ಮತ್ತು ಅಯೋಧ್ಯೆ ವೆಂಕಟೇಶ ಇದ್ದರು.
ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸಿದವು.
ವರದಿ: ಜಿಲಾನಸಾಬ್ ಬಡಿಗೇರ್
