ಕಂಪ್ಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳ ಸಮಗ್ರ ಅಭಿವೃದ್ಧಿಯೊಂದಿಗೆ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಇಲ್ಲಿನ ಸ್ಥಳೀಯ ಸಕ್ಕರೆ ಕಾರ್ಖಾನೆಯ 21 ಮತ್ತು 23ನೇ ವಾರ್ಡಿನಲ್ಲಿ 2026-27ನೇ ಸಾಲಿನ ಕೆಕೆಆರ್‌ಡಿಬಿ (KKRDB) 2515 ಮ್ಯಾಕ್ರೋ ಯೋಜನೆಯಡಿ ಸುಮಾರು 1.28 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ಪ್ರತಿಯೊಂದು ರಂಗದಲ್ಲೂ ಸಾಕಷ್ಟು ಅನುದಾನ ಬಳಸಿಕೊಂಡು ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಜನತೆಯ ಆಶೀರ್ವಾದಕ್ಕೆ ತಕ್ಕಂತೆ ಬದ್ಧತೆಯಿಂದ ಕೆಲಸ ಮಾಡುವುದು ನನ್ನ ಧ್ಯೇಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದ ಜಾನೂರು ರಸ್ತೆಯ 23ನೇ ವಾರ್ಡಿನ ಸೋಮಪ್ಪ ಬಡಾವಣೆಯಲ್ಲಿಯೂ ಲಕ್ಷಾಂತರ ರೂಪಾಯಿ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕರು ಅಡಿಗಲ್ಲು ಪೂಜೆ ನೆರವೇರಿಸಿದರು.
ನಂ.2 ಮುದ್ದಾಪುರದಲ್ಲೂ ಚಾಲನೆ:
ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂ.2 ಮುದ್ದಾಪುರ ಗ್ರಾಮದಲ್ಲಿ 90 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ ಸಲ್ಲಿಸಿ, ಗ್ರಾಮೀಣ ಭಾಗದ ಸೌಕರ್ಯಗಳಿಗೂ ಒತ್ತು ನೀಡಲಾಗುವುದು ಎಂದರು.
ಈ ಕಾರ್ಯಕ್ರಮಗಳಲ್ಲಿ ಪ್ರಮುಖ ಮುಖಂಡರಾದ ಕೆ.ಭಾಸ್ಕರ್‌ರೆಡ್ಡಿ, ಬಿ.ಲಕ್ಷ್ಮಣ, ರಂಗಸ್ವಾಮಿ, ಚಿಟ್ಟಿ, ಆಧಿನಾರಾಯಣ, ಮೈಮೂದ್, ಬಿ.ಶೇಖರ, ಡಿಶ್ ಪ್ರಸಾದ್, ಕರಿಬಸವನಗೌಡ, ಕೆ.ಎಸ್.ಚಾಂದ್‌ಬಾಷಾ, ಸಿ.ಆರ್.ಹನುಮಂತ, ಜಿ.ರಾಮಣ್ಣ, ಗೋಪಾಲ, ಎ.ಸಿ.ದಾನಪ್ಪ, ಆಟೋ ರಘು, ಕೊಟ್ಟಾಲ್ ವಿರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
