ಕಂಪ್ಲಿ: “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜಾರಿಯಲ್ಲಿರುವ ಸಮಾಜಮುಖಿ ಹಾಗೂ ಆರ್ಥಿಕ ಕಾರ್ಯಕ್ರಮಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು” ಎಂದು ಶಾಸಕ ಜೆ.ಎನ್. ಗಣೇಶ್ ಕರೆ ನೀಡಿದರು. ಪಟ್ಟಣದ ಕೊಟ್ಟೂರುಸ್ವಾಮಿ ಶಾಖಾಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಸಹಸ್ರ ಬಿಲ್ವಾರ್ಚನ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಡವರ ಆರ್ಥಿಕ ಸಬಲೀಕರಣ, ಮಹಿಳೆಯರ ಸ್ವಯಂ ಉದ್ಯೋಗ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ನೀಡುತ್ತಿರುವ ಕೊಡುಗೆ ಅಪಾರ ಎಂದರು.
ಹೆಚ್. ವೀರಾಪುರದ ಜಡೇಶಿವಯೋಗಿ ಮಠದ ಶ್ರೀ ಜಡೇಶ ತಾತನವರು ಆಶೀರ್ವಚನ ನೀಡಿ, “ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯ ನಿಸ್ವಾರ್ಥ ಸೇವೆ ಶ್ಲಾಘನೀಯ” ಎಂದರು. ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ್ ಮಾತನಾಡಿ, ಸ್ಥಳೀಯ ಮಲ್ಲಪ್ಪನ ಕೆರೆ ಅಭಿವೃದ್ಧಿಗೆ ಸಂಸ್ಥೆ ಕೈಜೋಡಿಸಿದೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯದ 17 ಸಾವಿರ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಲಕ್ಷಾಂತರ ರೂ. ಅನುದಾನ ನೀಡಿದ್ದಾರೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ‘ಆರೋಗ್ಯ ರಕ್ಷಾ’ ವಿಮೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ಯೋಜನಾಧಿಕಾರಿ ಎಲ್. ರಾಘವೇಂದ್ರ, ಪುರಸಭೆ ಅಧ್ಯಕ್ಷ ಮಂಜುನಾಥ್, ಉಪಖಜಾನಾಧಿಕಾರಿ ಪಿ. ಅಲ್ಲಾಭಕ್ಷ, ಕೃಷಿ ವಿಭಾಗದ ಅಧಿಕಾರಿ ಎಸ್. ಬಿ. ಸಂಜೀವ್ಕುಮಾರ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪುರೋಹಿತರಾದ ಧನುಂಜಯ ಸ್ವಾಮಿ ಹಾಗೂ ಬಸವರಾಜ ಸ್ವಾಮಿ ನೇತೃತ್ವದಲ್ಲಿ ಬಿಲ್ವಾರ್ಚನೆ ಪೂಜೆ ನೆರವೇರಿತು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *