ಮಸ್ಕಿ: ಮಾಜಿ ಸಚಿವ ಕೆ.ಶಿವನಗೌಡ ನಾಯಕರ 49ನೇ ಜನುಮ ದಿನದ ಅಂಗವಾಗಿ ಕೆಎಸ್‌ಎನ್ ಸಾಮಾಜಿಕ ಜನ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಜು.14 ರಂದು ಕವಿತಾಳ ಪಟ್ಟಣದಲ್ಲಿ ಸಂಕಲ್ಪ ಸಮಾಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪೂರ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಿ ಸಮತೋಲನ ಜಲಾಶಯ, ತಿಂಥಣಿ ಬ್ರಿಡ್ಜ್ ಬಳಿ ಜಲಾಶಯ ನಿರ್ಮಾಣ ಹಾಗೂ ಏಮ್ಸ್ ಸ್ಥಾಪನೆ ಕುರಿತು ಸಂಕಲ್ಪ ಸಮಾಗಮ ಮಾಡುವ ಸಮಾವೇಶದ ಮೂಲಕ ಹೋರಾಟಕ್ಕೆ ಸ್ಫೂರ್ತಿ ದೊರೆಯುವ ನಿರೀಕ್ಷೆಯಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅನೇಕರು ಭಾಗವಹಿಸಲಿರುವ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಮಾವೇಶದ ಮೂಲಕ ಏಮ್ಸ್ ಹೋರಾಟದ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯಲಿದ್ದು, ಮುಂದಿನ ಕೇಂದ್ರ ಸರ್ಕಾರ ಬಜೆಟ್ ಸಿದ್ಧತೆ ಮುನ್ನ ಏಮ್ಸ್ ಸ್ಥಾಪನೆ ಕುರಿತು ಕೇಂದ್ರದ ಮೇಲೆ ಒತ್ತಡ ಹಾಕಲು ಈ ಸಮಾವೇಶದ ಮೂಲಕ ಒತ್ತಾಯಿಸಲಾಗುತ್ತದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿAದ ಪ್ರತಿ ವರ್ಷ ಲಕ್ಷಾಂತರ ಕ್ಯೂಸೆಕ್ ನೀರು ಸಮುದ್ರ ಪಾಲಾಗುತ್ತಿದೆ. ಮಾನ್ವಿ, ಸಿಂಧನೂರು, ಮಸ್ಕಿ, ಸಿರವಾರ, ಅರಕೇರ, ರಾಯಚೂರು ಗ್ರಾಮೀಣ ಹಾಗೂ ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ಕನಕಗಿರಿ ಭಾಗದ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ. ನವಲಿ ಜಲಾಶಯ ನಿರ್ಮಾಣವಾದರೆ. ಎರಡು ಬೆಳೆಗಳಿಗೆ ಶಾಶ್ವತ ನೀರು ಮತ್ತು ಕೊನೆಯ ಭಾಗದ ರೈತರಿಗೆ ನೀರಾವರಿ, ಸಾವಿರಾರು ಕಾರ್ಮಿಕರಿಗೆ ಸ್ಥಳೀಯ ಉದ್ಯೋಗ, ಗ್ರಾಮೀಣ ವಲಸೆ ನಿಯಂತ್ರಣ, ಅಂತರ್ಜಲ ಮಟ್ಟ ಏರಿಕೆ, ಫ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರು ಮತ್ತು ಮುಂದಿನ ಪೀಳಿಗೆಗೆ ನೀರಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಈ ಸಂಕಲ್ಪ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀರಪ್ಪ ವೆಂಕಟಾಪೂರ ಅಮರೇಶ ಅಂಕುಶದೊಡ್ಡಿ, ಶಿವರಾಜ ಎಸ್.ರಾಮಲದಿನ್ನಿ, ವಿಶ್ವನಾಥ ಹಸಮಕಲ್, ದೇವೆಂದ್ರಪ್ಪ ಕಾಟಗಲ್, ಸುರೇಶ ಕಾಟಗಲ್, ಹನುಮಂತ ಮಾರಲದಿನ್ನಿ, ಅಮರೇಶ ಡಾಲಿ ಸೇರಿದಂತೆ ಕೆಎಸ್‌ಎನ್ ಅಭಿಮಾನಿಗಳಿದ್ದರು.

