ಮಾನ್ವಿ -: ತಾಲೂಕಿನ ರಾಜಾಲಬಂಡ ಗ್ರಾಮದ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆ (ಆರ್ ಡಿಎಸ್)ಯ ಅಣೆಕಟ್ಟೆ ಸ್ಥಳಕ್ಕೆ ತೆಲಂಗಾಣ ರಾಜ್ಯದ ಭಾರತ ರಾಷ್ಟ್ರ ಸಮಿತಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪ್ರವೀಣಕುಮಾರ ನೇತೃತ್ವದಲ್ಲಿ ಪಕ್ಷದ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಒಳಗೊಂಡ ನೂರಕ್ಕೂ ಹೆಚ್ಚು ಮುಖಂಡರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆಯ ಅಣೆಕಟ್ಟೆ ವ್ಯಾಪ್ತಿಯಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಂದ ಕೈಗೊಳ್ಳಲಾಗಿರುವ ವಿವಿಧ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಹಾಗೂ ಅಣೆಕಟ್ಟೆ ಪ್ರದೇಶವನ್ನು ಅವರು ಪರಿಶೀಲಿಸಿದರು.
ತೆಲಂಗಾಣದ ಮಾಜಿ ಸಚಿವ ಶ್ರೀನಿವಾಸಗೌಡ ಮಾತನಾಡಿ, ‘ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ತೆಲಂಗಾಣ ರಾಜ್ಯದ ಹಿತಾಸಕ್ತಿಯನ್ನು ಮರೆತಿದ್ದಾರೆ. ತುಂಗಭದ್ರಾ ನದಿ ನೀರು ಹಂಚಿಕೆಯ ಕುರಿತು ಈ ಹಿಂದೆ ಕೈಗೊಳ್ಳಲಾಗಿದ್ದ ಅಂತರರಾಜ್ಯ ನೀರಿನ ಹಂಚಿಕೆ ಒಪ್ಪಂದವನ್ನು ಉಲ್ಲಂಘಿಸಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳು ಕೃಷಿ ಹಾಗೂ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ’ ಎಂದು ದೂರಿದರು.
‘ತೆಲಂಗಾಣ ರಾಜ್ಯ ಸರ್ಕಾರ ಈ ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ತೆಲಂಗಾಣ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕೂಡ ಸರಿಪಡಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ತೆಲಂಗಾಣದ ನೀರಾವರಿ ಸಚಿವರು ಕೂಡ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ. ರಾಜಲಬಂಡಾ ತಿರುವು ನಾಲಾ ಯೋಜನೆಯ ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳು ಜಂಟಿಯಾಗಿ ಸಭೆಗಳನ್ನು ನಡೆಸಿ, ಕಾಮಗಾರಿಗಳಿಗೆ ಒಪ್ಪಿಗೆ ಪಡೆದ ನಂತರವೇ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೂಡಲೇ ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳು ಕೈಗೊಂಡಿರುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.
ಬಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪ್ರವೀಣಕುಮಾರ ಮಾತನಾಡಿ, ‘ಒಪ್ಪಂದದ ಪ್ರಕಾರ ತೆಲಂಗಾಣ ರಾಜ್ಯಕ್ಕೆ ತುಂಗಭದ್ರಾ ನದಿಯ ನೀರು ನಿಗದಿತ ಪ್ರಮಾಣದಲ್ಲಿ ತಲುಪದ ಕಾರಣ ತೆಲಂಗಾಣ ರಾಜ್ಯದ ಅಲಂಪುರ್ ಹಾಗೂ ಮಹಬೂಬ್ ನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಇದೆ’ ಎಂದರು.
‘ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆಯ ಅಣೆಕಟ್ಟೆ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸುಮಾರು 2 ಟಿಎಂಸಿ ನೀರು ಬಳಕೆ ಮಾಡಲಾಗುತ್ತಿರುವ ಕುರಿತು ಸಂಪೂರ್ಣ ಮಾಹಿತಿಯನ್ನು ಭಾರತ ರಾಷ್ಟ್ರ ಸಮಿತಿ ರಾಷ್ಟ್ರೀಯ ಅಧ್ಯಕ್ಷರಿಗೆ ಹಾಗೂ ತೆಲಂಗಾಣ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಮ್ಮ ರಾಜ್ಯದ ತುಂಗಭದ್ರಾ ನದಿ ನೀರಿನ ಹಕ್ಕಿಗಾಗಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು. ತೆಲಂಗಾಣದ ಮಾಜಿ ಸಚಿವ ಲಕ್ಷ್ಮೀರೆಡ್ಡಿ ಜಡಚರ್ಲ, ವಿಧಾನ ಪರಿಷತ್ ಸದಸ್ಯ ನವೀನ್ ಕುಮಾರ ರೆಡ್ಡಿ, ಚಲ್ಲಾ ವೆಂಕಟರಾಮರೆಡ್ಡಿ, ಮಾಜಿ ಶಾಸಕ ರಾಮಮೋಹನ್ ರೆಡ್ಡಿ, ನರೇಂದ್ರ ರೆಡ್ಡಿ, ಜಯಪಾಲ ಯಾದವ ಉಪಸ್ಥಿತರಿದ್ದರು.
ತಹಶೀಲ್ದಾರ್ ಭೇಟಿ -:
ಮಾನ್ವಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಸ್ಥಳಕ್ಕೆ ಭೇಟಿ ನೀಡಿ ಬಿಆರ್‌ಎಸ್ ಮುಖಂಡರೊಂದಿಗೆ ಚರ್ಚಿಸಿದರು.
ನಂತರ ಮಾತನಾಡಿದ ಅವರು, ‘ಅಣೆಕಟ್ಟೆ ವ್ಯಾಪ್ತಿಯಲ್ಲಿ ಒಪ್ಪಂದದ ಪ್ರಕಾರ ಕುಡಿಯುವ ನೀರಿನ ಯೊಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಲಿಖಿತವಾಗಿ ಕೇಳಿದರೆ ಅಗತ್ಯ ದಾಖಲೆಗಳನ್ನು ಒದಗಿಸಲಾಗುವುದು’ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ರಾಯಚೂರು ವಿಭಾಗದ ಎಇಇ ಲೋಕೇಶ ಹಾಗೂ ಇತರ ಅಧಿಕಾರಿಗಳು ಅಗತ್ಯ ಮಾಹಿತಿ ನೀಡಿದರು.

