ಬಳ್ಳಾರಿ / ಕಂಪ್ಲಿ : ಸರ್ಕಾರದ ವಿವಿಧ ಯೋಜನೆಗಳಿಗಾಗಿ ನಾನಾ ಅರ್ಜಿಗಳನ್ನು ಸಲ್ಲಿಸಲು ತುಂಬಾ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಕೂಡಲೇ ಹೆಚ್ಚುವರಿಯಾಗಿ ಡಾಟಾ ಆಪರೇಟರ್ ನೇಮಿಸಬೇಕೆಂದು ಆಗ್ರಹಿಸಿ, ಭೀಮ್ ಆರ್ಮಿ ಪದಾಧಿಕಾರಿಗಳು ಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಭೀಮ್ ಆರ್ಮಿಯ ಗೌರವಾಧ್ಯಕ್ಷ ಸಣಾಪುರ ಮರಿಸ್ವಾಮಿ ಮಾತನಾಡಿ, ತಾಲೂಕು ಕೇಂದ್ರವಾಗಿ ಕೆಲ ವರ್ಷಗಳು ಕಳೆದಿವೆ. ಇಲ್ಲಿನ ಜನಸಂಖ್ಯೆ ಹೆಚ್ಚಾಗುವ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸಬೇಕಾಗಿದೆ. ಇಲ್ಲಿನ ಕಂದಾಯ ಇಲಾಖೆಯ ನಾಡ ಕಛೇರಿಯಲ್ಲಿ ಹಲವು ವರ್ಷಗಳಿಂದ ಒಬ್ಬರೇ ಡಾಟಾ ಆಪರೇಟರ್ ಇದ್ದಾರೆ. ಆದರೆ, ಇತ್ತೀಚೆಗೆ ಜನಸಂಖ್ಯೆ ಹೆಚ್ಚಾದಂತೆಲ್ಲಾ ಅರ್ಜಿದಾರರು ಹೆಚ್ಚಾಗುತ್ತಿದ್ದಾರೆ. ಜಾತಿ, ಆದಾಯ, ಹೊಸ ಎ,ಬಿ,ಸಿ ತಿದ್ದುಪಡಿ, ವಿಧವಾ ವೇತನ, ಸರ್ವೆ ಅರ್ಜಿ ಸೇರಿ ವಿವಿಧ ಅರ್ಜಿಗಳನ್ನು ಸಲ್ಲಿಸಲು ಗ್ರಾಮೀಣ ಭಾಗದ ಜನರು ಮತ್ತು ರೈತರು ಶಾಲಾ ಮಕ್ಕಳು ಬಹಳಷ್ಟು ಜನರು ಬರುತ್ತಾರೆ. ಆದರೆ, ಒಬ್ಬ ಡಾಟಾ ಆಪರೇಟರ್ ಎಲ್ಲಾ ಜನರ ಅರ್ಜಿ ಸ್ವೀಕರಿಸಲು ಬಹಳ ತೊಂದರೆಯಾಗುತ್ತದೆ. ಈ ಕಾರ್ಯಾಲಯದಲ್ಲಿ ಸರ್ಕಾರ ನಿಗಧಿಪಡಿಸಿದ ಧರಪಟ್ಟಿ ಹಾಕಿ, ಶ್ರೀಘದಲ್ಲಿ ಹೆಚ್ಚುವರಿಯಾಗಿ ಡಾಟಾ ಎಂಟ್ರಿ ಆಪರೇಟರ್ ನೇಮಿಸಬೇಕು ಎಂದರು.
ಭೀಮ್ ಆರ್ಮಿ ಅಧ್ಯಕ್ಷ ಎ.ಎಸ್.ಯಲ್ಲಪ್ಪ ಮಾತನಾಡಿ, ಜನರು ಸಲ್ಲಿಸುವ ಪ್ರತಿ ಅರ್ಜಿಗೂ ಶುಲ್ಕದ ಪಟ್ಟಿಯನ್ನು ಕಚೇರಿಯಲ್ಲಿ ಅಳವಡಿಸಬೇಕು. ನಾಡ ಕಾರ್ಯಾಲಯದಲ್ಲಿ ಸರ್ಕಾರ ನಿಗಧಿ ಪಡಿಸಿದ ಧರಪಟ್ಟಿ ಹಾಕಿ ಆದಷ್ಟು ಬೇಗ ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರ್ ಅನ್ನು ನಿಯೋಜಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಿಕ್ಲಿ ಬಸವರಾಜ, ಆರ್.ಎಂ.ಎಚ್.ಧನುಷ್, ಮೆಟ್ರಿ ಬಸವರಾಜ, ಎಚ್.ಹುಲಿಗೇಶ್, ಪ್ರವೀಣ, ಶಿವಕುಮಾರ್, ಬಸಮ್ಮ ಇತರಿದ್ದರು.

Leave a Reply

Your email address will not be published. Required fields are marked *