ಮಾನ್ವಿ : ತಾಲೂಕಿನ ಆಲ್ದಾಳ ಗ್ರಾಮದ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ದೇವಾಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಿಭಾವ, ಸಂಪ್ರದಾಯ, ವೈಭವಗಳ ಸಮನ್ವಯದಲ್ಲಿ ರಥೋತ್ಸವ ಬಹು ವೈಭವವಾಗಿ ನೆರವೇರಿತು.

ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಭದ್ರಕಾಳಿ ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಪೂಜೆ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ವಿಶೇಷವಾಗಿ ನಡೆಯಿತು. ಗೋಪುರ ಮತ್ತು ರಥಕ್ಕೆ ಕಳಸಾರೋಹಣ, ಹೂವಿನ ಅಲಂಕಾರಗಳನ್ನು ನೆರವೇರಿಸಿ ಉತ್ಸವಕ್ಕೆ ಭಕ್ತರನ್ನು ಆಕರ್ಷಿಸುವ ಸಾಂಪ್ರದಾಯಿಕ ಸಿಂಗರ ಮಾಡಲಾಯಿತು.

ಸಂಜೆಗೆ ಶ್ರೀ ಭದ್ರಕಾಳಿ – ಶ್ರೀ ವೀರಭದ್ರೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ನಂದಿಧ್ವಜ, ಕಳಸ ಮತ್ತು ಪುರವಂತಿಕೆಯೊಂದಿಗೆ ಭವ್ಯ ಮೆರವಣಿಗೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಭಕ್ತರ ಹರಕೆ ತಿರಸುವ ಸಂಪ್ರದಾಯವಾಗಿ ಸಾವಿರಾರು ಭಕ್ತರು ಅಗ್ನಿಕುಂಡ ಪ್ರವೇಶಿಸಿ ತಮ್ಮ ಹರಕೆ ತಿರಿಸಿದರು.

ಯಮನೂರು ಗ್ರಾಮದ ಬಸವೇಶ್ವರ ಸಂಘದ ರುದ್ರಮುನಿ ಸ್ವಾಮಿ ಹಾಗೂ ಗುರು ಶಾಂತಯ್ಯ ಸ್ವಾಮಿಗಳಿಂದ ಪುರವಂತಿಕೆ ಸೇವೆ ನೆರವೇರಿಸಲಾಯಿತು. ಅಮರಪ್ಪ ಹೂಗಾರ ಹಾಗೂ ಸಂಗಡಿಗರಿಂದ ಶಹನಾಯಿ ವಾದ್ಯ ಕಾರ್ಯಕ್ರಮ ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.

ಭಕ್ತಭಾವ, ಸಂಪ್ರದಾಯ ಹಾಗೂ ವೈಭವಗಳ ಮಧ್ಯೆ ನಡೆದ ಈ ರಥೋತ್ಸವ ಆಲ್ದಾಳ ಗ್ರಾಮದಲ್ಲಿ ಶ್ರದ್ಧೆ-ಪರಂಪರೆಯ ನೈಸರ್ಗಿಕ ನೋಟವನ್ನು ಮೆರೆಯಿತು.

Leave a Reply

Your email address will not be published. Required fields are marked *