ಸಿಂಧನೂರು ನಗರದ ವಾರ್ಡ್ ನಂಬರ್ 14ರ ನಿವಾಸಿ, ವೀರಶೈವ ಸಮಾಜದ ಮುಖಂಡ ಶರಣಯ್ಯಸ್ವಾಮಿ ಶಾಸ್ತ್ರಿಮಠ ಕಂದಗಲ್ (48) ಮಗನ ಮದುವೆಯ ಸಂಭ್ರಮದ ದಿನದಂದೇ ಹೃದಯಘಾತದಿಂದ ನ.30 ರಂದು ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಶರಣಯ್ಯ ಸ್ವಾಮಿ ಕಳೆದ ತಿಂಗಳಿನಿಂದ ಮಗನ ಮದುವೆ ಸಂಭ್ರಮದಲ್ಲಿ ಇದ್ದು, ಸಂಬಂಧಿಕರನ್ನು ಆಹ್ವಾನಿಸಿದ್ದರು. ಮದುವೆ ಸಂಭ್ರಮ ನೋಡಬೇಕಾದ ಕ್ಷಣದಲ್ಲಿ ಹೃದಯಘಾತದಿಂದ ನಿಧನರಾಗಿದ್ದು ಮದುವೆ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
ಲಕ್ಷ್ಮಿದೇವಿ ಮತ್ತು ಶರಣಯ್ಯ ಶಾಸ್ತ್ರಿಮಠ ಕಂದಗಲ್ ಇವರ ಮಗನ ಮದುವೆ ಭಾನುವಾರ ಸಿಂಧನೂರಿನ ಜೈನ್ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆ 45 ನಿಮಿಷಕ್ಕೆ ನಿಗದಿಯಾಗಿತ್ತು. ಶನಿವಾರ ದೇವರ ಕಾರ್ಯದಲ್ಲಿ ಶರಣಯ್ಯಸ್ವಾಮಿ ಶಾಸ್ತ್ರಿಮಠ ಕಂದಗಲ್ ಭಾಗವಹಿಸಿದ್ದರು.
ಬಂಧು ಬಳಗದವರಿಗೆಲ್ಲ ಶನಿವಾರ ಸಂಜೆ ದೇವರ ಕಾರ್ಯಕ್ಕೆ ಬರಲು ತಿಳಿಸಿದ್ದರು. ಬಂದವರೊಂದಿಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಬಿಪಿ ಕಡಿಮೆಯಾಗಿ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ವೀರಶೈವ ಸಮಾಜದ ಮುಖಂಡರು ಹಾಗೂ ಜಂಗಮ ಸಮಾಜದ ಕ್ರಿಯಾಶೀಲ ವ್ಯಕ್ತಿ, ಸರಳ ವ್ಯಕ್ತಿತ್ವವನ್ನು ಜೀವಾಳವಾಗಿಸಿಕೊಂಡಿದ್ದ ಶರಣಯ್ಯಸ್ವಾಮಿ ಶಾಸ್ತ್ರಿ ಜನಾನುರಾಗಿ ವ್ಯಕ್ತಿಯಾಗಿದ್ದರು. ಬಡ ಕುಟುಂಬದಲ್ಲಿ ಜನಿಸಿದ್ದ ಅವರು, ಸ್ವಂತ ಉದ್ಯೋಗ ಮಾಡಿಕೊಂಡು ಬೆಳೆದು ಇತರೆ ಸಮುದಾಯದವರಿಗೂ ಆತ್ಮೀಯ ಗೆಳೆಯರಾಗಿದ್ದರು. ಅವರ ನಿಧನದಿಂದ ಇಡೀ ಕ್ಷೇತ್ರಕ್ಕೆ ನೋವು ಉಂಟಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಅನೇಕರು ಪ್ರಾರ್ಥನೆ ಸಲ್ಲಿಸಿದ್ದಾರೆ.

