ರಾಯಚೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಯಚೂರು–ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ “ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆ” ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು. ಕಾರ್ಯಕ್ರಮವನ್ನು ಜಿ ಕುಮಾರ್ ನಾಯಕ. ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ಅಸ್ತಿತ್ವವೇ ಮತದಾನದ ಹಕ್ಕಿನ ಮೇಲೆ ನಿಂತಿದೆ ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕನ ಮತವು ಕೇವಲ ಹಕ್ಕು ಮಾತ್ರವಲ್ಲ, ದೇಶದ ಭವಿಷ್ಯ ನಿರ್ಧರಿಸುವ ಶಕ್ತಿಯಾಗಿದೆ. ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ಜನರು ಎಚ್ಚರಿಕೆಯಿಂದ ಎದುರಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡುವುದು, ಮತದಾನದ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಸುವುದು ಅಥವಾ ಜನರ ಧ್ವನಿಯನ್ನು ಕುಂಠಿತಗೊಳಿಸುವ ಯಾವುದೇ ಕ್ರಮಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತವೆ ಎಂದು ಅವರು ಹೇಳಿದರು.
ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಆ ಹಕ್ಕುಗಳನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷವು ಸದಾ ಜನಸಾಮಾನ್ಯರ ಪರವಾಗಿ ನಿಂತು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿದೆ. ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದಿಕ್ಕಿನಲ್ಲಿ ಪಕ್ಷ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಯುವಜನತೆ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮಹಿಳೆಯರು ನಾಯಕತ್ವದ ಜವಾಬ್ದಾರಿಗಳನ್ನು ಸ್ವೀಕರಿಸಿ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪಕ್ಷದ ಸಂಘಟನೆ ಗ್ರಾಮಮಟ್ಟದಿಂದ ಬಲವಾಗಬೇಕು; ಆಗ ಮಾತ್ರ ಜನರ ಆಶಯಗಳಿಗೆ ತಕ್ಕ ರಾಜಕೀಯ ಬದಲಾವಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಪಾಟೀಲ್ ಇಟಗಿ , ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸರೆಡ್ಡಿ ಅನಾಪುರ, ಕಾರ್ಯಾಧ್ಯಕ್ಷರಾದ ಎ ವಸಂತ್ ಕುಮಾರ್ , ಶಾಸಕರಾದ ಬಸನಗೌಡ ದದ್ದಲ್ ಸೇರಿದಂತೆ ಎರಡೂ ಜಿಲ್ಲೆಯ ಬ್ಲಾಕ್ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್ ಘಟಕದವರು, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯಲ್ಲಿ ಮತದಾರರ ಜಾಗೃತಿ ಅಭಿಯಾನ, ಪಕ್ಷ ಸಂಘಟನೆ ಬಲವರ್ಧನೆ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಜನಪರ ಹೋರಾಟಗಳ ಕುರಿತು ಚರ್ಚೆ ನಡೆಯಿತು. ಕಾರ್ಯಕರ್ತರು ಪಕ್ಷದ ಸಂದೇಶವನ್ನು ಮನೆಮನೆಗೂ ತಲುಪಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ ಸಂಕಲ್ಪ ವ್ಯಕ್ತಪಡಿಸಿದರು.


