ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಅನುದಾನವನ್ನು ತಂದು ಕೆಲಸ ಮಾಡಿದ್ದೇನೆ ನಾನು ಎಲ್ಲದರಲ್ಲೂ ರಾಜಕಾರಣ ಮಾಡುವ ಸ್ವಭಾವದ ವ್ಯಕ್ತಿ ಅಲ್ಲ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ,ಶಾಸಕ ಅಪ್ಪಾಜಿ ನಾಡಗೌಡರು ಹೇಳಿದರು. ಗುರುವಾರ ಪಟ್ಟಣದ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ರೂ. 5 ಕೋಟಿ ಮೊತ್ತದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಅಡತ್ ಅಸೋಸಿಯೇಷನ್ ಸಭಾ ಭವನದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವರು ಎಲ್ಲದರಲ್ಲೂ ರಾಜಕಾರಣ ಮಾಡುವ ಹವ್ಯಾಸವನಿಟ್ಟುಕೊಂಡು ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವಿರೋಧಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅವರು ಎಷ್ಟೇ ಪ್ರಯತ್ನಿಸಿದರೂ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ತಾಳಿಕೋಟಿ ಪಟ್ಟಣದ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ, ಈಗಾಗಲೇ ಹಲವಾರು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ನೂತನ ತಾಲೂಕು ಆದ ನಂತರ ಇದಕ್ಕೆ ಅಗತ್ಯವಾದ ಕಚೇರಿಗಳನ್ನು ಆರಂಭಿಸಲು ಹಂತ ಹಂತವಾಗಿ ಪ್ರಯತ್ನಿಸುತ್ತಿದ್ದೇನೆ, ಎಲ್ಲದಕ್ಕೂ ಆರ್ಥಿಕ ಅನುಮೋದನೆ ಪಡೆದು ಕೆಲಸ ಮಾಡಬೇಕು ಇಲ್ಲದೆ ಹೋದಲ್ಲಿ ಯೋಜನೆಗಳು ಕಾಗದದ ವಸ್ತುಗಳಾಗುತ್ತವೆ ಜಾರಿಯಲ್ಲಿ ಬರುವುದಿಲ್ಲ ಎಂದ ಅವರು ಮೂರು ವರ್ಷಗಳ ಅವಧಿಯಲ್ಲಿ ತಾಳಿಕೋಟಿ ಮುದ್ದೇಬಿಹಾಳ ಹಾಗೂ ನಾಲ್ತವಾಡ ಎಪಿಎಂಸಿಗೆ ಒಟ್ಟು 19.13 ಕೋಟಿ ಅನುದಾನ ಕೊಟ್ಟಿದ್ದೇನೆ. ಇನ್ನೂ ಎರಡು ವರ್ಷಗಳ ಅವಧಿ ಇದ್ದು ಸಾಕಷ್ಟು ಕೆಲಸ ಮಾಡಲು ಅವಕಾಶವಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ನನ್ನೊಂದಿಗೆ ಕೈಜೋಡಿಸಿ. ನೀವು ತೋರುತ್ತಿರುವ ಒಗ್ಗಟ್ಟು ಅಭಿವೃದ್ಧಿಯ ಕಾರ್ಯಗಳಿಗಾಗಿರಲಿ ಹೊರತು ಕೆಟ್ಟ ರಾಜಕಾರಣ ಮಾಡಲಿಕ್ಕಾಗಿ ಅಲ್ಲ ಅದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದರು. ಬೆಳಗಾವಿ ವಿಭಾಗೀಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ್ ಹಾಗೂ ಪ್ರಭುಗೌಡ ಮದರ್ಕಲ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಮಹದೇವಪ್ಪ ಕುಂಬಾರ, ಪುರಸಭೆ ಮಾಜಿ ಸದಸ್ಯರಾದ ಪಿ.ಬಿ.ಮದರಕಲ್ಲ, ಅಕ್ಕಮಹಾದೇವಿ ಕಟ್ಟಿಮನಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ಸರಶೆಟ್ಟಿ, ಎಂ.ಜಿ.ಪಾಟೀಲ,ಸಿ.ಎಸ್.ಮಾಳಿ, ಚಿಂತಪ್ಪ ಯಾಳಗಿ,ಸುರೇಶಧಣಿ ನಾಡಗೌಡ ಬಿಂಜಲಭಾವಿ, ಶರಣುಧಣಿ ದೇಶಮುಖ, ಸಂಗನಗೌಡ ಅಸ್ಕಿ, ಬಸವರಾಜ ಕುಂಬಾರ, ಇಬ್ರಾಹಿಂ ಮನ್ಸೂರ್, ಶಿವಾನಂದ ಹೂಗಾರ, ಮೋದಿನ ನಗಾರ್ಚಿ,ಫಯಾಜ ಉತ್ನಾಳ, ಸಿಕಂದರ್ ಡೋಣಿ, ಕೃ.ಉ.ಮಾ.ಸ.ಬೆಳಗಾವಿ ವಿಭಾಗೀಯ ಎಇಇ ವಿಜಯಕುಮಾರ, ಸಹಾಯಕ ಅಭಿಯಂತರ ಲಮಾಣಿ, ತಾಳಿಕೋಟಿ ಎಪಿಎಂಸಿ ಕಾರ್ಯದರ್ಶಿ ಆರ್ ಎಸ್ ರಾಠೋಡ, ಅಡತ್ ಅಸೋಸಿಯೇಷನ್ ಸದಸ್ಯರು, ವರ್ತಕರು ಹಾಗೂ ಎಪಿಎಂಸಿ ಕಾರ್ಯಾಲಯದ ಸಿಬ್ಬಂದಿಗಳು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *