ತಾಲೂಕಿನ ವಿರೂಪಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ 4ನೇ ಮೈಲ್ ಕ್ಯಾಂಪ್‌ನ ಸರ್ವೆ ನಂ.38/17 ರಲ್ಲಿ 00.12 ಗುಂಟೆ ಜಮೀನನ್ನು ವಿ.ಲಕ್ಷ್ಮಿಕಾಂತ್ ತಂದೆ ಭಾಸ್ಕರರಾವ್ ಎಂಬಾತನ ಹೆಸರಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವ ಕ್ರಮವನ್ನು ಕರ್ನಾಟಕ ರೈತ ಸಂಘ, ಎಐಕೆಕೆಎಸ್, ಗ್ರಾಮ ಘಟಕ, ಖಂಡಿಸುತ್ತದೆ ಎಂದು ಅಧ್ಯಕ್ಷ ಗೌಡಪ್ಪ ಜಾಲಿಹಾಳ ಹೇಳಿದರು.
ಇದು ಕೇವಲ ಭೂ ಪರಿವರ್ತನೆಯ ಪ್ರಶ್ನೆಯಲ್ಲ ಜನವಸತಿ ಪ್ರದೇಶದ ಮಧ್ಯೆ ಪರಿಸರ, ಜನರ ಆರೋಗ್ಯ, ಕೃಷಿ ಭೂಮಿ ಹಾಗೂ ಜಾನುವಾರುಗಳ ಬದುಕಿನ ಮೇಲೆ ನೇರ ದಾಳಿ ನಡೆಸುವ ಹುನ್ನಾರವಾಗಿದೆ. ಜನರ ವಿರೋಧವನ್ನು ಲೆಕ್ಕಿಸದೆ ಕೆಲವು ಅಧಿಕಾರಿಗಳು ಕೈಗೊಂಡಿರುವ ಈ ಜನವಿರೋಧಿ ಕ್ರಮಗಳು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಈ ಹಿಂದೆ ಇದೇ ವ್ಯಕ್ತಿಯು ಅನಧಿಕೃತವಾಗಿ ಪೀಠೋಪಕರಣ ಕೈಗಾರಿಕಾ ಘಟಕವನ್ನು ಸ್ಥಾಪಿಸಿದ ಸಂದರ್ಭದಲ್ಲಿ ಪರಿಸರ ಮಾಲಿನ್ಯ, ನೀರು ಮತ್ತು ಗಾಳಿಯ ಕಲುಷಿತತೆ, ಸಾಂಕ್ರಾಮಿಕ ರೋಗಗಳ ಭೀತಿ ಹಾಗೂ ಕೃಷಿ ಭೂಮಿಯ ನಾಶದ ವಿರುದ್ಧ ಪರಿಸರ ರಕ್ಷಣಾ ವೇದಿಕೆ, ಸಿಂಧನೂರು ಮತ್ತು ಸ್ಥಳೀಯ ಜನರು ಮತ್ತು ಕರ್ನಾಟಕ ರೈತ ಸಂಘ ಸತತ ಒಂದೂವರೆ ವರ್ಷಗಳ ಕಾಲ ಹೋರಾಟ ನಡೆಸಲಾಗಿತ್ತು. ಆ ಹೋರಾಟದ ಫಲವಾಗಿ ದಿನಾಂಕ 27-01-2026 ರಂದು ವಿರೂಪಾಪುರ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಗಂಭೀರವಾಗಿ ಚರ್ಚಿಸಿ, ಘಟಕವನ್ನು ಸ್ಥಗಿತಗೊಳಿಸುವ ನಿರ್ಣಯವನ್ನು ಅಂಗೀಕರಿಸಿ, ಸಂಬಂಧಿಸಿದ ಇಲಾಖೆಗಳ ಮೂಲಕ ಘಟಕವನ್ನು ಬಂದ್ ಮಾಡಿಸಲಾಗಿತ್ತು.
ಈಗ ಹಿಂದಿನ ಸಾಮಾನ್ಯ ಸಭೆಯ ನಿರ್ಣಯವನ್ನು ಧಿಕ್ಕರಿಸಿ, ಮತ್ತೆ ಕೈಗಾರಿಕಾ ಘಟಕಕ್ಕೆ ನಿರಾಪೇಕ್ಷಣ ಪತ್ರ (ಎನ್ಒಸಿ) ಸಮ್ಮತಿ ನೀಡುವುದು ಗ್ರಾಮಪಂಚಾಯತಿ ಜನಪರ ಬದ್ಧತೆಗೆ ವಿರುದ್ಧವಾದ ಕ್ರಮವಾಗಲಿದೆ. ಇದು ಸ್ಥಳೀಯ ಜನರ ಆರೋಗ್ಯ, ಪರಿಸರ ಹಾಗೂ ಜೀವನೋಪಾಯದ ಮೇಲೆ ವಿನಾಶಕಾರಿ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ.
ಬೇಡಿಕೆಗಳು:
ಜಾಗದಲ್ಲಿ ಯಾವುದೇ ಕೈಗಾರಿಕಾ ಘಟಕ ಸ್ಥಾಪನೆಗೆ ನಿರಾಪೇಕ್ಷಣ ಪತ್ರ (ಎನ್ಒಸಿ) ಸಮ್ಮತಿ ನೀಡಬಾರದು.
ದಿನಾಂಕ 27-01-2026ರ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯ ನಿರ್ಣಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತಹಸೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪರಿಸರ ಅಧಿಕಾರಿಗಳು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳಿಗೆ ಗ್ರಾಮ ಪಂಚಾಯತ್‌ನಿಂದ ಅಧಿಕೃತ ಪತ್ರ ಬರೆದು ಜನವಸತಿ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಬೇಕು.
ಜನರ ಜೀವ, ಆರೋಗ್ಯ, ಕೃಷಿ ಮತ್ತು ಪರಿಸರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕಾನೂನು ಕ್ರಮ ಕೈಗೊಳ್ಳಬೇಕು.
ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಕೈಗಾರಿಕಾ ಘಟಕಕ್ಕೆ ಅವಕಾಶ ನೀಡುವ ಯಾವುದೇ ಪ್ರಯತ್ನ ನಡೆದರೆ, ಕರ್ನಾಟಕ ರೈತ ಸಂಘ ಗ್ರಾಮ ಘಟಕ 4ನೇ ಮೈಲ್ ಕ್ಯಾಂಪ್ ಹಾಗೂ ಸ್ಥಳೀಯ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಬದ್ಧರಾಗಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಅದರ ಸಂಪೂರ್ಣ ಹೊಣೆಗಾರಿಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆಯೇ ಇರುತ್ತದೆ. ಜನರ ಬದುಕು ಮತ್ತು ಪರಿಸರದ ರಕ್ಷಣೆ ನಮ್ಮ ಹಕ್ಕು, ಅದಕ್ಕಾಗಿ ಹೋರಾಟ ನಮ್ಮ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ: ಪ್ರಧಾನ ಕಾರ್ಯದರ್ಶಿ ರಂಗಪ್ಪ ನಾಯಕ, ಉಪಾಧ್ಯಕ್ಷ ಎಂ.ಶಂಕರ್, ಕಾರ್ಯದರ್ಶಿ
ಮುತ್ತುರಾಜ್, ಖಜಾಂಚಿ ಕನಕಪ್ಪ ಮುರಣಿ,
ಕಾರ್ಯಕಾರಿ ಸಮಿತಿ ಸದಸ್ಯರಾದ, ಅಮರೇಶಪ್ಪ ಕುಂಬಾರ, ಸಣ್ಣ ಈರಪ್ಪ, ರಾಮಣ್ಣ ಬೆಂಗಳೂರು, ಮೌಲಪ್ಪ ಹಾರಾಪುರ, ಆನಂದಪ್ಪ, ಬಸವರಾಜ ಹಂಚಿನಾಳ, ನಾಗರಾಜ ಮಡಿವಾಳ, ರಾಜು, ಧರಗಯ್ಯ ಸೇರಿದಂತೆ ಅನೇಕರು ಇದ್ದರು.

