ರಾಯಚೂರು, ಜೂನ್ 10: ರಾಯಚೂರು ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ರಾಂಪೂರ ಕೆರೆ ಶುದ್ಧೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಸಚಿವರು, ವಿಧಾನ ಪರಿಷತ್ತಿನ ಮಾಜಿ ಸಭಾ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಕೆರೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿಯನ್ನು ಅವಲೋಕಿಸಿದ ಅವರು, ರಾಂಪೂರ ಕೆರೆ ರಾಯಚೂರು ನಗರದ ಪ್ರಮುಖ ಕುಡಿಯುವ ನೀರಿನ ಮೂಲಗಳಲ್ಲಿ ಒಂದಾಗಿದ್ದು, ಇದರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಹೇಳಿದರು. ಕೆರೆಯಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ಮಣ್ಣಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಅದರ ಫಲವತ್ತತೆ ಹಾಗೂ ಪರಿಸರದ ಮೇಲಿನ ಪರಿಣಾಮಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜನತೆಗೆ ಸರಬರಾಜಾಗುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು. ಕೆರೆಯ ನೀರು ಕಲುಷಿತಗೊಳ್ಳದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನೀರಿನ ಮೂಲಗಳನ್ನು ಸಂರಕ್ಷಿಸುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಸಂಬಂಧಿತ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಿದರು.
ಹೊಸದಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೆರೆಯ ಸುತ್ತಮುತ್ತ ಸುರಕ್ಷತಾ ಕ್ರಮಗಳ ಭಾಗವಾಗಿ ಗುಣಮಟ್ಟದ ಫೆನ್ಸಿಂಗ್ ಅಳವಡಿಸಬೇಕು. ಇದರಿಂದ ಕೆರೆಯ ಸಂರಕ್ಷಣೆ ಸಾಧ್ಯವಾಗುವುದರ ಜೊತೆಗೆ ಅನಧಿಕೃತ ಪ್ರವೇಶ ಹಾಗೂ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಂಪೂರ ಕೆರೆಯಿಂದ ರಾಯಚೂರು ನಗರದ 18 ವಾರ್ಡ್‌ಗಳಿಗೆ ಹಾಗೂ ಕೃಷ್ಣಾ ನದಿಯಿಂದ 12 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾಗಿ ನೀರು ಸಂಗ್ರಹಣೆ, ಶುದ್ಧೀಕರಣ ಹಾಗೂ ವಿತರಣಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಹಾಗೂ ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ. ಶಾಂತಪ್ಪ, ಜಿ. ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಸಾಜಿದ್ ಸಮೀರ್, ರುದ್ರಪ್ಪ ಅಂಗಡಿ, ಬಸವರಾಜ್ ಪಾಟೀಲ್ ಅತ್ತನೂರು, ಹರಿಬಾಬು, ತಿಮ್ಮಪ್ಪ ಅಸ್ಕಿಹಾಳ ಸೇರಿದಂತೆ ಹಲವು ಮುಖಂಡರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

