ಸಿರುಗುಪ್ಪ – ಡಾ ಬಿ ಆರ್ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಬಳ್ಳಾರಿ ನಾಗಪ್ಪ ಅವರ ಜನುಮದಿನದ ಪ್ರಯುಕ್ತ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಜಯಪ್ರಭು ಪಾಸ್ಟರ್ ಉದ್ಘಾಟಿಸಿ ಮಾತನಾಡಿ ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ಆಚರಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಚಿಕ್ಕಬಳ್ಳಾರಿ ನಾಗಪ್ಪ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ನೆರವಾಗುವ ಉದ್ದೇಶದಿಂದ ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉನ್ನತ ಸಾಧನೆ ಮಾಡಿ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಪ್ರತಿಭೆಗೆ ಸೂಕ್ತ ಗೌರವ ಹಾಗೂ ಪ್ರೋತ್ಸಾಹ ದೊರೆತಾಗ ಇನ್ನಷ್ಟು ಸಾಧನೆ ಮಾಡಲು ಉತ್ತೇಜನ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖಂಡರಾದ ಧರಪ್ಪ ನಾಯಕ, ಚಿಕ್ಕಬಳ್ಳಾರಿ ಶ್ರೀನಿವಾಸರೆಡ್ಡಿ, ಶಿವಕುಮಾರ,ಮೇಕೆಲಿ ವೀರೇಶ್, ಎಂ ಮಹಾದೇವ,ಗಾಳೆಪ್ಪ, ಹನುಮಂತ ರೆಡ್ಡಿ,ನಾರಾಯಣ ರೆಡ್ಡಿ ಪಂಪಾರೆಡ್ಡಿ,ಲೋಕೇಶ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

