ಬಳಗಾನೂರು, ಮೇ 2026-27ನೇ ಶೈಕ್ಷಣಿಕ ಸಾಲಿನಿಂದ ಬಳಗಾನೂರಿನಲ್ಲಿ ನೂತನವಾಗಿ ಆರಂಭವಾಗಿರುವ ಸರಕಾರಿ ಪದವಿಪೂರ್ವ ಕಾಲೇಜಿನ ದಾಖಲಾತಿಗಾಗಿ ಪಟ್ಟಣದ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳು ಕಳೆದ ಒಂದು ವಾರದಿಂದ ಸುತ್ತಮುತ್ತಲಿನ ಗ್ರಾಮಗಳು ಮತ್ತು ಕ್ಯಾಂಪ್ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಆಹ್ವಾನಿಸುತ್ತಿರುವುದು ಗಮನಾರ್ಹವಾಗಿದೆ.
ಅದರ ಭಾಗವಾಗಿ ರವಿವಾರ ಬೆಳಿಗ್ಗೆ ಪಟ್ಟಣ ಪಂಚಾಯ್ತಿಯ ಉಪಾಧ್ಯಕ್ಷ ಹುಸೇನ್ ಭಾಷಾ ಬೂದಗುಂಪ, ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಮುಖಂಡರಾದ ಸಂಜಯ್ ಶೇಟ್, ಬಸವರಾಜ ಅಂಬ್ಲಿ,ಅಯ್ಯಪ್ಪ ಕಿನ್ನಾಳ್, ಉಪನ್ಯಾಸಕರಾದ ನಾಗಯ್ಯ ಗಣಾಚಾರಿ, ಗೋವಿಂದರಡ್ಡಿ ಗದ್ದಿ ಹಾಗೂ ಸುರೇಶ ಬಳಗಾನೂರು ಅವರು ಬೆಳ್ಳಿಗನೂರು, ಬುದ್ದಿನ್ನಿ ಹಾಗೂ ಸಾಗರ ಕ್ಯಾಂಪ್ ಗ್ರಾಮಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಪಾಲಕರಿಗೆ ಸರಕಾರಿ ಕಾಲೇಜಿನ ಮಹತ್ವದ ಕುರಿತು ಮಾಹಿತಿ ನೀಡಿದರು.
ಸರಕಾರಿ ಕಾಲೇಜಿನಲ್ಲಿ ಲಭ್ಯವಾಗುವ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ, ಅನುಭವೀ ಉಪನ್ಯಾಸಕರು, ಸರ್ಕಾರದ ವಿವಿಧ ಸೌಲಭ್ಯಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ದೊರೆಯುವ ಅನುಕೂಲಗಳ ಕುರಿತು ವಿವರವಾಗಿ ತಿಳಿಸಿ ವಿದ್ಯಾರ್ಥಿಗಳನ್ನು ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮನವರಿಕೆ ಮಾಡಿದರು.
ಈ ವೇಳೆ ಆಯಾ ಗ್ರಾಮಗಳ ಗ್ರಾಮಸ್ಥರು ಸಹ ಉತ್ತಮ ಸ್ಪಂದನೆ ವ್ಯಕ್ತಪಡಿಸಿ ತಮ್ಮ ಮಕ್ಕಳನ್ನು ಬಳಗಾನೂರಿನ ಸರಕಾರಿ ಪಿಯು ಕಾಲೇಜಿಗೇ ದಾಖಲಿಸಲು ಸಮ್ಮತಿಸಿದರು ಎಂದು ತಿಳಿದುಬಂದಿದೆ.
ಖಾಸಗಿ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಪ್ರಚಾರಕ್ಕಾಗಿ ಗ್ರಾಮಗಳಿಗೆ ತೆರಳುವುದು ಸಾಮಾನ್ಯ. ಆದರೆ ಸರಕಾರಿ ಪಿಯು ಕಾಲೇಜಿನ ಅಭಿವೃದ್ಧಿ ಹಾಗೂ ದಾಖಲಾತಿ ಹೆಚ್ಚಳಕ್ಕಾಗಿ ಊರಿನ ಮುಖಂಡರು ಮತ್ತು ಶಿಕ್ಷಣ ಪ್ರೇಮಿಗಳು ಸ್ವಯಂಪ್ರೇರಿತವಾಗಿ, ಸ್ವಂತ ಖರ್ಚಿನಲ್ಲಿ ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿರುವುದು ಬಳಗಾನೂರಿನ ಜನರಿಗೆ ಶಿಕ್ಷಣದ ಮೇಲೆ ಹಾಗೂ ತಮ್ಮ ಊರಿನ ಅಭಿವೃದ್ಧಿಯ ಮೇಲೆ ಇರುವ ಅಭಿಮಾನವನ್ನು ತೋರಿಸುತ್ತದೆ.ಇದಲ್ಲವೇ ಶಿಕ್ಷಣ ಪಸರಿಸುವ ಪರಿ?” ಎಂಬ ಮಾತು ಗ್ರಾಮಸ್ಥರ ನಡುವೆ ಕೇಳಿಬಂದಿತು.
ವರದಿ: ಸುರೇಶ ಬಳಗಾನೂರು

