ಮಾನ್ವಿ : ಯೋಗ ಸನ್ನಿದಿ ಜ್ಞಾನ ವಿದ್ಯಾಪೀಠ ಟ್ರಸ್ಟ್(ರಿ) ವತಿಯಿಂದ ಕೋನಾಪುರ ಪೇಟೆ ಪ್ರೌಢ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಒಂದು ದಿನದ ಯೋಗ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಮುನ್ನಡೆಸಿದ ಯೋಗ ಗುರು ಅನ್ನದಾನಯ್ಯ ಅವರು ತ್ರಿಕೋಣಾಸನ, ಪರಿವೃತ್ತ ತ್ರಿಕೋಣಾಸನ, ಗೋಮುಖಾಸನ, ಜಾನುಶಿರಶಾಸನ, ವೃಕ್ಷಾಸನ, ಪಾದಹಸ್ತಾಸನ ಸೇರಿದಂತೆ ಹಲವು ಯೋಗಾಸನಗಳನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿದರು. ಜೊತೆಗೆ ನಾಡೀ ಶುದ್ಧಿ ಪ್ರಾಣಾಯಾಮ, ಬ್ರಹ್ಮರಿ ಪ್ರಾಣಾಯಾಮ ಹಾಗೂ ಮುದ್ರೆಗಳ ವೈಜ್ಞಾನಿಕ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಗುರು ವಿರುಪಾಕ್ಷಪ್ಪ ಅವರು, ಕಳೆದ ಹತ್ತು ವರ್ಷಗಳಿಂದ ಮಾನ್ವಿ ನಗರದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಯೋಗ ಸೇವೆ ನೀಡುತ್ತಾ ಬಂದಿರುವ ಯೋಗ ಗುರು ಅನ್ನದಾನಯ್ಯ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು. ನಂತರ ಶಾಲಾವತಿಯಿಂದ ಯೋಗ ಗುರು ಅನ್ನದಾನಯ್ಯ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕರಾದ ವಿಜಯಕುಮಾರ್ ಸಂಜೀವಪ್ಪ, ರಘುನಂದನ್ ರಾಮಸ್ವಾಮಿ, ಪೈಮುದ್ದೀನ್, ಅತಿಥಿ ಶಿಕ್ಷಕರಾದ ನವೀನ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

