ಸಿಂಧನೂರು: ನಗರದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜುಗಳ ವತಿಯಿಂದ ಪ್ರತೀ ಶನಿವಾರದಂತೆ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 11 ಏಪ್ರಿಲ್ ಶನಿವಾರದಂದು ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಯಶಸ್ವಿಯಾಗಿ ಜರುಗಿತು.ಈ ಕಾರ್ಯಕ್ರಮಕ್ಕೆ ಸಿಂಧನೂರಿನ ಅಮರೇಶ್ವರ ಆಯುರ್ವೇದ ಆಸ್ಪತ್ರೆಯ ಖ್ಯಾತ ಆಯುರ್ವೇದ ತಜ್ಞರಾದ ಡಾ. ರೋಹಿತ್ ಅಂಗಡಿ (MD.Ayu) ಅವರು ಮುಖ್ಯ ಅತಿಥಿಯಾಗಿ ಆಗಮಿಸಿ “ಪಂಚಕರ್ಮ ಹಾಗೂ ಆಯುರ್ವೇದ ದಿನಚರಿ” ಎಂಬ ಮಹತ್ವದ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹಾಗೂ ಮಾಹಿತಿಪೂರ್ಣ ಉಪನ್ಯಾಸ ನೀಡಿದರು.ತಮ್ಮ ಉಪನ್ಯಾಸದಲ್ಲಿ ಅವರು ಆಯುರ್ವೇದದ ಮೂಲ ತತ್ವಗಳನ್ನು ವಿವರಿಸುವುದರ ಜೊತೆಗೆ ದೈನಂದಿನ ಜೀವನದಲ್ಲಿ ಅನುಸರಿಸಬೇಕಾದ ಆಯುರ್ವೇದ ದಿನಚರಿಯ ಮಹತ್ವವನ್ನು ವಿವರಿಸಿದರು. ವಿಶೇಷವಾಗಿ ಪಂಚಕರ್ಮ ಚಿಕಿತ್ಸೆಯ ಬಗ್ಗೆ ವಿವರವಾಗಿ ತಿಳಿಸಿದ ಅವರು, ದೇಹದ ಒಳಗಿನ ವಿಷಪದಾರ್ಥಗಳನ್ನು ಹೊರಹಾಕುವ ಮೂಲಕ ದೇಹವನ್ನು ಶುದ್ಧೀಕರಿಸುವ ಅತ್ಯಂತ ಪರಿಣಾಮಕಾರಿ ವಿಧಾನವೆಂದು ಹೇಳಿದರು.ಪಂಚಕರ್ಮದ ಉಪಯೋಗಗಳನ್ನು ವಿವರಿಸಿದ ಅವರು,
ದೇಹದ ಡಿಟಾಕ್ಸಿಫಿಕೇಶನ್ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,
ದೇಹ ಮತ್ತು ಮನಸ್ಸಿಗೆ ಸಮತೋಲನ ನೀಡುತ್ತದೆ,
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ,
ಸಂಧಿವಾತ, ಬೆನ್ನುನೋವು ಹಾಗೂ ದೀರ್ಘಕಾಲದ ರೋಗಗಳಿಗೆ ಉತ್ತಮ ಪರಿಹಾರ ನೀಡುತ್ತದೆ,
ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ,
ಒತ್ತಡ ಮತ್ತು ಮಾನಸಿಕ ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಅವರು ನರ್ಸಿಂಗ್ ವೃತ್ತಿಯ ಮಹತ್ವವನ್ನು ವಿಶೇಷವಾಗಿ ವಿವರಿಸಿ, ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು. ರೋಗಿಗಳ ಸೇವೆಯಲ್ಲಿ ನರ್ಸ್‌ಗಳ ಮಾನವೀಯತೆ, ಸಹನೆ ಹಾಗೂ ಸೇವಾಭಾವನೆ ಅತ್ಯಂತ ಅಗತ್ಯವೆಂದು ಹೇಳಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನರ್ಸಿಂಗ್ ಪ್ರಾಚಾರ್ಯರಾದ ಲಾಜರ್ ಸಿರಿಲ್ ಅವರು, ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಸಹಕಾರಿಯಾಗಿದ್ದು, ಜೀವನದಲ್ಲಿ ಉತ್ತಮ ದಾರಿದೀಪವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಡಾ. ರೋಹಿತ್ ಅಂಗಡಿ ಅವರು ಅತ್ಯಂತ ಮಹತ್ವದ ವಿಷಯವನ್ನು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸಿದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್ ಕೆ ಅವರ ಪರವಾಗಿ, ಎಲ್ಲಾ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನುಅರ್ಪಿಸಿರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಕೆ, ನರ್ಸಿಂಗ್ ಪ್ರಾಚಾರ್ಯ ಲಾಜರ್ ಸಿರಿಲ್ ಹಾಗೂ ಆಸಿಫ್ ಹಾಗೂ ಉಪನ್ಯಾಸಕರಾದ ರಾಜೇಶ್, ಅಶು ಪಾಷಾ, ಶೋಭಾ, ಸುಧಾ, ರಾಧಿಕಾ, ಸಂತೋಷಿ, ವೀರೇಶ್ವರಿ, ಚೈತ್ರ, ದಿಲೀಪ್, ಹರ್ಷಿತಾ, ಸುರೇಶ್ ಯಾದವ್ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಒಟ್ಟಿನಲ್ಲಿ, ಈ ವಿಶೇಷ ಉಪನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆಯುರ್ವೇದದ ಅರಿವು ಹೆಚ್ಚಿಸಿ, ಆರೋಗ್ಯ ಸೇವಾ ಕ್ಷೇತ್ರದತ್ತ ಅವರ ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.





