ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಆದರೆ ಬಂದು ಹೋಗುವ ನಡುವೆ ಕೇವಲ ಕತ್ತಲೆಯೇ ಮಾತ್ರ ಆವರಿಸದಂತೆ ಬದುಕುವ ಬದುಕೇ ನಿಜವಾದ ಬದುಕು. ಇಂದಿನ ತಾಂತ್ರಿಕ ಯುಗದಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಮಕ್ಕಳನ್ನು ಬೆಳೆಸುವ ವಿಧಿ- ವಿಧಾನ, ರೀತಿ- ನೀತಿ, ಸಂಸ್ಕಾರ ಸಂಸ್ಕೃತಿ, ಆಪ್ಯಾಯಮಾನವಾಗಿ ಅತಿಯಾದ ಅಭಿಮಾನದಿಂದ ಕೇವಲ ಪರ್ಸೆಂಟೇಜ್ ಆಫ್ ಮಾರ್ಕ್, ಅವರು ಗಳಿಸುವ ಅಂಕಗಳ ಮೇಲೆ ಗಣನೀಯವಾಗಿ ಅವಲಂಬಿತರಾಗಿದ್ದೇವೆ. ಆದರೆ ನಿಜವಾದ ಬದುಕಿನ ಪರಿಯನ್ನು ಅರ್ಥೈಸುವುದರಲ್ಲಿ ನಿಜವಾಗಿಯೂ ಎಡವುತಿದ್ದೇವೆ.
ನೆನಪಿರಲಿ, ಪ್ರೀತಿಯ ಓದುಗ ಮಿತ್ರರೇ,
ನೈಜ ಬಾಳಿದ ನಿಜ ಬದುಕಿನ ಹಾದಿಯಲ್ಲಿ ತಂದೆ ತಾಯಿಯ ಕಷ್ಟ ಹಾಗೂ ಕನಿಷ್ಠ ತಿಳುವಳಿಕೆಯನ್ನು ಸಹ ನೀಡದಂತಹ ಬದುಕು ಇಂದು ಮಕ್ಕಳನ್ನು ಲಾಲಿಸಿ ಪಾಲಿಸಿ ಮುದ್ದಿಸುವಂತಹ ಪಾಲಕರದ್ದಾಗಿದೆ. ಮಕ್ಕಳಿಗೆ ಇಂದು ಶಿಕ್ಷಣದ ಜೊತೆಗೆ ಬದುಕಿನ ನೈತಿಕ ಮೌಲ್ಯಗಳನ್ನು ತಿಳಿಸುವ ಆದ್ಯ ಕರ್ತವ್ಯ ಪ್ರತಿಯೊಬ್ಬ ತಂದೆ ತಾಯಿಯ ನಿಜವಾದ ಜವಾಬ್ದಾರಿಯಾಗಿದೆ. ಜನ ಮರಳು ಜಾತ್ರೆ ಮರಳು ಎಂಬಂತೆ ನನ್ನ ಮಗ ಅಥವಾ ಮಗಳು ಗರಿಷ್ಠ ಅಂಕಗಳನ್ನು ಪಡೆದಿದ್ದಾಳೆ ಅಥವಾ ಪಡೆದುಕೊಂಡಿದ್ದಾನೆ ಎಂಬ ಅತಿಯಾದ ಅಭಿಮಾನದಿಂದ ಕೇವಲ ಪುಸ್ತಕದ ಗೀಳಾಗಿ ಏನೂ ಅರಿಯದ ಸ್ಥಿತಿಗೆ ಬಂದು ತಲುಪಿರುತ್ತಾರೆ. ಇಂತಹ ಸಂದರ್ಭದಲ್ಲಿ ತಂದೆ ತಾಯಿಯ ಆದ್ಯ ಕರ್ತವ್ಯವೇನೆಂದರೆ ನಿತ್ಯವೂ ಪೂಜೆ ಪುನಸ್ಕಾರ, ಸಂಸ್ಕೃತ ಅಭ್ಯಾಸ, ಆದ್ಯಾತ್ಮಿಕ ಒಲವಿನ ಪಾಠ ಪ್ರವಚನಗಳು ಓದಿನ ಜೊತೆಗೆ ಆದೇಶಿಸಿ ಅಭ್ಯಸಿಸಿಕೊಂಡರೆ ಮಗುವಿನ ವೈಯಕ್ತಿಕ ಜೀವನ ಸುಂದರಮಯವಾಗುತ್ತದೆ. ಬದುಕಿನ ಹಾಗೆ ಯಲ್ಲಿ ನಮ್ಮ ಮಗುವಿಗೆ ಪ್ರತಿಯೊಂದರ ಬೆಲೆ ತಿಳಿಸುವ ಕೆಲಸ ಮಾಡಬೇಕಾಗುತ್ತದೆ. ಮಗು ಕೇಳಿದ ತಕ್ಷಣ ಯಾವುದೇ ವಸ್ತುವಾಗಲಿ ಅಥವಾ ತಿಂಡಿ ತಿನಿಸಾಗಲಿ ಕೊಡಿಸಿದರೆ ಅದರ ನಿಜವಾದ ಬೆಲೆ ಅರ್ಥವಾಗುವುದಿಲ್ಲ. ಸ್ವಲ್ಪ ಕಾಲ ತಡೆದು ಅದರ ಅರ್ಥ ಆ ಮಗುವಿನ ಅರಿವಿಗೆ ಬಂದಾಗ ಕೊಡಿಸಿದಾಗ ಮಾತ್ರ ಅದರ ನಿಜವಾದ ಬೆಲೆ ತಿಳಿಯುತ್ತದೆ.
ಹಣ, ಆಸ್ತಿ, ಅಂತಸ್ತು ಎಲ್ಲರೂ ಎಲ್ಲ ಕಾಲಕ್ಕೂ ಅವರವರ ಪ್ರಯತ್ನದ ಮೇಲೆ ಸಂಪಾದಿಸುವ ಜೀವನದ ಬಹುಮೂಲ್ಯ ಗರಿಮೆಯಾಗಿದೆ. ಸರ್ವ ಸಮುದಾಯದ ಎಲ್ಲ ಗಣ್ಯ ಮಹಾನುಭಾವರುಗಳೆಲ್ಲ ತಿಳಿದುಕೊಳ್ಳಲೇಬೇಕಾದ ನೈಜ ಸಂಗತಿ ಎಂದರೆ ನೀವು ಗಳಿಸುವ ಹಣ ಆಸ್ತಿ ಸಂಪತ್ತು ಐಶ್ವರ್ಯ ಐಷಾರಾಮಿ ಕಾರು ಬಂಗಲೇ ಯಾವುದೂ ಸಹ ನಿಮ್ಮ ಸ್ವತ್ತಲ್ಲ. ನಿಮ್ಮ ಮಕ್ಕಳಿಗೆ ಕಲಿಸುವ ವಿನಯ, ವಿನಮ್ರತೆ, ಬದುಕು ವ್ಯವಹರಿಸುವ ರೀತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಸಾಧ್ಯತೆಯ ಸಭ್ಯತೆಯ ಪರಿಯೇ ನಿಮ್ಮ ಜೀವನದ ನಿಜವಾದ ಸಾಧನೆಯಾಗಲಿದೆ.
ನೀವು ಹೋದರೂ ನಿಮ್ಮ ಆದರ್ಶಗಳನ್ನು ಪಾಲಿಸುವ ನಿಮ್ಮ ಮಕ್ಕಳಲ್ಲಿ ಜಗತ್ತು ನಿಮ್ಮನ್ನು ಕಾಣುತ್ತದೆ. ನಿಮ್ಮ ಅಸ್ಮಿತೆಯ ಅರಿವು ನಿಮ್ಮ ಮಕ್ಕಳಲ್ಲಿ ಮೂಡಿಸಿ ಅವರ ಸಮಗ್ರ ಏಳಿಗೆಗೆ ಹಾಗೂ ಮಾನವೀಯತೆಯ ಉದ್ಧಾರಕ್ಕಾಗಿ ಪ್ರತಿಯೊಬ್ಬ ತಂದೆ ತಾಯಿಯು ನಿಜವಾಗಿಯೂ ಶ್ರಮಿಸಬೇಕಾಗಿರುವುದು ವಿಪರ್ಯಾಸವಾದರೂ ಅನಿವಾರ್ಯ ಸಂಗತಿಯಾಗಿದೆ. ನಮ್ಮದೇ ಆದ ದೈನಂದಿನ ಬದುಕಿನ ಸುತ್ತ ಸುತ್ತುತ್ತಿರುವಾಗ ಮಕ್ಕಳಲ್ಲಿ ಗಮನಹರಿಸುವ ರೀತಿ ಕಡಿಮೆಯಾದಂತೆ ಭಾಸವಾಗದಿರಲಿ. ನನ್ನ ಮಗ, ನನ್ನ ಮಗಳು, ನನ್ನ ಜೀವನ, ನನ್ನ ಮಡದಿ, ಇದು ನನ್ನ ಬದುಕು , ಈ ಬದುಕು ಬರುಡಾಗದಿರಲಿ ಈ ಬದುಕು ಮತ್ತೊಂದು ಬದುಕಿಗೆ ಬೆಂಗಾವಲಾಗಿ ದಿನಬೆಳಗುವ ಸೂರ್ಯ ಚಂದ್ರರಂತೆ ಶಾಶ್ವತವಾಗಿ ನಾವು ಹೋದ ಮೇಲು ನಮ್ಮ ಆದರ್ಶಗಳು ಸದಾ ಜೀವಂತವಾಗಿ ಅಮರವಾಗಿರಲಿ ಎಂಬ ಆತ್ಮೀಯತೆಯ ಆಸೆಯಲ್ಲಿ ನಿಮ್ಮ ಪ್ರೀತಿಯ ಡಾ ರವಿ ದಾನಿ
*ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿಂತಕರು ಕಾರಟಗಿ

