ಮುಖ್ಯಾಂಶಗಳು:
ಸ್ಥಳ: ಸಿರವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿ.
* ಆರೋಪಿ: ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ
* ಲಂಚದ ಮೊತ್ತ: 2 ಲಕ್ಷ ಬೇಡಿಕೆ 1 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
* ಕಾರ್ಯಾಚರಣೆ: ಮುಂಜಾನೆ 4 ಗಂಟೆಗೆ ಬಂಧನ.
* ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಭ್ರಷ್ಟ ಅಧಿಕಾರಿಗಳ ಪಾಲಿಗೆ ಈ ಕಾರ್ಯಾಚರಣೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.
ಕವಿತಾಳ ಎ 11 : ಅಕ್ರಮ ಸಂಪಾದನೆಯ ಅಮಲಿನಲ್ಲಿ ತೇಲುತ್ತಿದ್ದ ಅಧಿಕಾರಿಯೊಬ್ಬರು ಈಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ. ಇ-ಖಾತೆ ನೀಡಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟು, ಹಣದೊಂದಿಗೆ ಪರಾರಿಯಾಗಲು ಯತ್ನಿಸಿದ ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಕೊನೆಗೂ ಲೋಕಾ ಬಲೆಗೆ ಬಿದ್ದಿದ್ದಾರೆ.
ಘಟನೆಯ ಹಿನ್ನೆಲೆ: 2 ಲಕ್ಷಕ್ಕೆ ಬೇಡಿಕೆ
ಸಿರವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತೆ ನೀಡಲು ಮುಖ್ಯಾಧಿಕಾರಿ ಸುರೇಶ್ ರೆಡ್ಡಿ ಅವರು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗೆ ಸ್ಕೆಚ್ ಹಾಕಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಮೊದಲ ಕಂತಿನ ರೂಪದಲ್ಲಿ 1 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ.
ಹಣ ಹಿಡಿದು ಶರವೇಗದ ಓಟ:
ಪೊಲೀಸರ ಸುಳಿವು ಸಿಗುತ್ತಿದ್ದಂತೆ ಗಾಬರಿಗೊಂಡ ಮುಖ್ಯಾಧಿಕಾರಿ, ಹಣದ ಸಮೇತ ಶರವೇಗದಲ್ಲಿ ಕವಿತಾಳ ಪಟ್ಟಣದ ಕಡೆಗೆ ಪರಾರಿಯಾಗಲು ಯತ್ನಿಸಿದ್ದಾರೆ. ಬಿಟ್ಟು ಬಿಡದ ಲೋಕಾ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ.
ಒಂದು ಲಕ್ಷ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದ ಅಧಿಕಾರಿಯನ್ನು ಸತತವಾಗಿ ಫಾಲೋ ಮಾಡಿದ ಪೊಲೀಸರು, ಕೊನೆಗೂ ಆತನ ನೆಲೆ ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಸ್ನೇಹಿತನ ಮನೆಯಲ್ಲಿ ಅವಿತುಕೊಂಡಿದ್ದ ಆರೋಪಿ
ಪೊಲೀಸರಿಂದ ತಪ್ಪಿಸಿಕೊಳ್ಳಲು ಸುರೇಶ್ ಶೆಟ್ಟಿ ತನ್ನ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ, ಬಿಗಿ ಜಾಲ ಬೀಸಿದ್ದ ಲೋಕಾಯುಕ್ತ ತಂಡವು ಶುಕ್ರವಾರ ಬೆಳ್ಳಂ ಬೆಳಿಗ್ಗೆ 4 ಗಂಟೆಗೆ ಕಾರ್ಯಾಚರಣೆ ನಡೆಸಿ, ಸ್ನೇಹಿತನ ಮನೆಯಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದಿದೆ.
ಡ್ರಮ್‌ನಲ್ಲಿ ಅಡಗಿದ್ದ ಹಣ: ಪೊಲೀಸರಿಂದ ತಪ್ಪಿಸಿಕೊಳ್ಳಲು ಕವಿತಾಳದ ಸ್ನೇಹಿತನ ಮನೆಗೆ ಓಡಿದ್ದ ಮುಖ್ಯಾಧಿಕಾರಿ, ಲಂಚದ ಹಣವನ್ನು ಅಲ್ಲಿನ ನೀರಿನ ಡ್ರಮ್ ಒಂದರಲ್ಲಿ ಬಚ್ಚಿಟ್ಟಿದ್ದರು. ಚಾಣಾಕ್ಷ ಪೊಲೀಸರು ಡ್ರಮ್‌ನಲ್ಲಿದ್ದ 1 ಲಕ್ಷ ರೂ. ಹಣದ ಕಂತೆಯನ್ನು ಹೊರತೆಗೆದು ಜಪ್ತಿ ಮಾಡಿದ್ದಾರೆ.

