ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೃಷ್ಣಾ ಗ್ರಾಮದ ಕನ್ನಡ ಶಾಲೆಗೆ ರಾಯಚೂರಿನ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಏಪ್ರಿಲ್ 06ರ ಸೋಮವಾರ ದಂದು ಭೇಟಿ ನೀಡಿ, ಹಳೆ ವಿದ್ಯಾರ್ಥಿಗಳು ಹಾಗೂ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಗಡಿ ಪ್ರದೇಶದಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದೆಂದರು.
ಕೃಷ್ಣಾವರೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಆಗುವಂತೆ ನೋಡಿಕೊಳ್ಳುತ್ತೇವೆ. ಪ್ರವೇಶಕ್ಕಾಗಿ ವಲಸೆ ಪ್ರಮಾಣ ಪತ್ರ ಹಾಗೂ ಇತರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಲಾಗುವುದು. ಉದ್ಯೋಗದಲ್ಲಿ ಶೇ.5ರಷ್ಟು ಮೀಸಲಾತಿ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ತಿಳಿಸುತ್ತೇವೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಗಡಿ ಶಾಲಾ ಮಕ್ಕಳು ಸುಮಾರು 51 ವರ್ಷಗಳಿಂದ 10ನೇ ತರಗತಿ ನಂತರ ಪ್ರವೇಶಕ್ಕಾಗಿ, ವಲಸೆ ಪ್ರಮಾಣ ಪತ್ರಕ್ಕಾಗಿ, ಹಾಸ್ಟೆಲ್, ಬಸ್ ಪಾಸ್, ಜಾತಿ ಪ್ರಮಾಣ ಪತ್ರ, ಶಿಷ್ಯ ವೇತನ, ಉದ್ಯೋಗಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತಿವೆ. ಕರ್ನಾಟಕ ಸರಕಾರ ಇದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಕೃಷ್ಣಾ ಮಂಡಲದ ವಿದ್ಯಾಧಿಕಾರಿ ನಿಜಾಮುದ್ದೀನ್, ಗಡಿನಾಡು ಕನ್ನಡದ ಅಧ್ಯಕ್ಷರು ಮತ್ತು ಗೌರವ ಅಧ್ಯಕ್ಷರಾದ ಅಮರ್‌ದೀಕ್ಷಿತ್, ರಾಮಲಿಂಗಪ್ಪ ಕುನ್ನಿ ಅವರು ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ ಸುರೇಶ್ ವರ್ಮಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರಪ್ಪ ಹೋಕ್ರಾಣಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರವೀಣ್, ಸಾರ್ವಜನಿಕ ಶಿಕ್ಷಣ ಇಲಾಖೆಯ ರಂಗಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಶಿವಮಾನಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ರಾಯಚೂರು ಬಿಇಒ ಈರಣ್ಣ ಕೋಸಗಿ, ಕೃಷ್ಣಾ ಮಂಡಲದ ತಹಶೀಲ್ದಾರರು ಶ್ರೀನಿವಾಸ್, ಕೃಷ್ಣಾ ಪ್ರೌಢ ಶಾಲೆಯ ಮುಖ್ಯಗುರು ಕಿಶೋರ್ ಕುಮಾರ್, ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಕೃಷ್ಣಾ ಗ್ರಾಮದ ಅಧ್ಯಕ್ಷರು ಎಸ್.ನಾಗೇಂದ್ರ ಹಾಗೂ ಶಾಲೆ ಹಳೆ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು

