ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ರಕ್ತಸ್ರಾವ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಹಿಮೋಫಿಲಿಯಾ ಇಂಜೆಕ್ಷನ್ ನೀಡುತ್ತಿದ್ದು, ಕಾಯಿಲೆಗೆ ಒಳಗಾದ ಮಕ್ಕಳು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಅವರು ಸಲಹೆ ನೀಡಿದರು.
ಏಪ್ರಿಲ್ 06ರ ಸೋಮವಾರ ದಂದು ನಗರದ ರಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಕುಸುಮ ಸಂಜೀವಿನಿ ಯೋಜನೆಯಡಿ ಹಮ್ಮಿಕೊಂಡಿದ್ದ ಚುಚ್ಚು ಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
18 ಜನರಿಗೆ ಚುಚ್ಚು ಮದ್ದು ನೀಡಲಾಗಿದ್ದು, ಒಂದು ಇಂಜೆಕ್ಷನ್ ಬೆಲೆ ಸುಮಾರು 1.4 ಲಕ್ಷ ಆಗಲಿದೆ. ಇದರಿಂದ ಹಿಮೋಫಿಲಿಯಾ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಕುಟುಂಬದ ಮೇಲೆ ಆರ್ಥಿಕ ದುಷ್ಪರಿಣಾಮ, ಮನಸ್ಸಿಗೆ ನೆಮ್ಮದಿಯಿಲ್ಲದಿರುವುದಕ್ಕೆ ಕಾರಣವಾಗುವ ಹಿಮೋಫಿಲಿಯಾ ಎನ್ನುವುದು ರಕ್ತವು ಸರಿಯಾಗಿ ಹೆಪ್ಪುಗಟ್ಟದ, ಹೆಚ್ಚಾಗಿ ಆನುವಂಶಿಕವಾಗಿ ಬರುವ ಅಪರೂಪದ ರಕ್ತಸ್ರಾವದ ಕಾಯಿಲೆಯಾಗಿದೆ. ಇದರಲ್ಲಿ ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಪ್ರೋಟೀನ್‌ಗಳ (ಕ್ಲಾಟಿಂಗ್ ಫ್ಯಾಕ್ಟರ್ಸ್) ಕೊರತೆಯಿಂದಾಗಿ, ಗಾಯವಾದಾಗ ಅಥವಾ ಆಂತರಿಕವಾಗಿ ದೀರ್ಘಕಾಲ ರಕ್ತಸ್ರಾವವಾಗುವ ಹಿಮೋಫಿಲಿಯಾ ಎ ಪ್ಯಾಕ್ಟರ್ 8ರ ರೋಗದ ದುಗುಡವನ್ನು ದೂರ ಮಾಡಲು ದೇಶದಲ್ಲಿಯೇ ಕರ್ನಾಟಕ ಸರಕಾರವು ಉಚಿತವಾಗಿ ಹೆಮಿಲಿಬ್ರಾ ಲಸಿಕೆ ನೀಡಲು ಆರಂಭಿಸಿದೆ ಎಂದರು.
ಕುಸುಮ ಸಂಜೀವಿನಿ ಯೋಜನೆಯಡಿ ಉಚಿತವಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ
ಒಂದು ಮಗುವಿಗೆ ವರ್ಷಕ್ಕೆ ಸುಮಾರು 5 ಲಕ್ಷ ಮೌಲ್ಯದ ಇಂಜೆಕ್ಷನ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ್ ಅವರು ಮಾತನಾಡಿ, ಪ್ರತಿ ತಿಂಗಳು ಒಂದನೇಯ ಶನಿವಾರದಂದು ರಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚುಚ್ಚು ಮದ್ದು ನೀಡಲಾಗುತ್ತದೆ. ಸಾಂಕ್ರಾಮಿಕ ರೋಗವಲ್ಲದ ಆನುವಂಶಿಕ ಖಾಯಿಲೆಯಾಗಿದ್ದು, ಪದೆಪದೆ ಬರುವ ನೋವನ್ನು ಚುಚ್ಚುಮದ್ದು ಕಡಿಮೆ ಮಾಡುತ್ತದೆ. ಅಲ್ಲದೆ
ಆಗಾಗ್ಗೆ ಉಂಟಾಗುವ ರಕ್ತಸ್ರಾವದಿಂದ ರಕ್ಷಿಸುವ ಕಾರ್ಯ ಮಾಡುತ್ತದೆ ಎಂದರು.
ಹಿಮೋಫಿಲಿಯಾದ ಪ್ರಮುಖ ಕಾರಣ: ಇದು ಹೆಚ್ಚಾಗಿ ತಳಿ ಅಥವಾ ವಂಶವಾಹಿ ಮೂಲಕ ಪೋಷಕರಿಂದ ಮಗುವಿಗೆ ಹರಡುತ್ತದೆ, ಮುಖ್ಯವಾಗಿ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ. ಸಣ್ಣ ಗಾಯಗಳಿಗೂ ಅತಿಯಾದ ರಕ್ತಸ್ರಾವ, ಕೀಲುಗಳಲ್ಲಿ ಆಂತರಿಕ ರಕ್ತಸ್ರಾವ, ಮೂಗೇಟುಗಳು ಮತ್ತು ಮೂಗಿನಿಂದ ರಕ್ತಸ್ರಾವ ಬರುತ್ತದೆ ಎಂದು ಜಿಲ್ಲಾ ಆರ್.ಸಿ.ಆರ್.ಅಧಿಕಾರಿ ಡಾ.ನಂದಿತಾ ಎಮ್.ಎನ್., ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ಅಧಿಕ್ಷಕರಾದ ಡಾ.ಸೂರ್ಯಕಾಂತ ಎಮ್, ರಿಮ್ಸ್ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಹುಲ್ ಸಿ ಕೀರ್ತೆ, ತಜ್ಞ ವೈದ್ಯ ಡಾ.ಬಸವರಾಜ್, ಮಕ್ಕಳ ತಜ್ಞರಾದ ಡಾ.ಸುಕಾಣಿ, ಡಾ.ನಸೀಮಾ ಬೇಗಂ, ಪೇಥಾಲಜಿಸ್ಟ್ ಡಾ.ರಶೀದ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


