ರಾಯಚೂರು ಏಪ್ರಿಲ್ 01 (ಕರ್ನಾಟಕ ವಾರ್ತೆ): ಗ್ರಾಮೀಣ ಮಟ್ಟದಲ್ಲಿ ನವೀನತೆಯನ್ನು ಉತ್ತೇಜಿಸಲು ಹಾಗೂ ಮಹಾನಗರಗಳ ಹೊರತಾಗಿ ಭಾರತದ ಉದ್ಯಮಶೀಲ ಪರಿಸರವನ್ನು ವಿಸ್ತರಿಸಲು ಮಹತ್ವದ ಹೆಜ್ಜೆಯಾಗಿ, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತನ್ನ ಸ್ಟಾರ್ಟ್ ಆಪ್ ಇಂಡಿಯಾ ಉಪಕ್ರಮದಡಿ ತೇಜಸ್ಕಾ (TEJAS–Transforming Entrepreneurial Journeys Across States & Districts ರ್ಯಕ್ರಮವನ್ನು ಜಾರಿಗೆ ತರುತ್ತಿದೆ.
ಈ ಉಪಕ್ರಮವು ವಿಕಸಿತ ಭಾರತ@2047 ಎಂಬ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಗ್ರಾಮೀಣ ಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಜಿಲ್ಲಾ ಮಟ್ಟದ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
TEJAS ಕಾರ್ಯಕ್ರಮವು ಸ್ಟಾರ್ಟ್ ಆಪ್ ಇಂಡಿಯಾ ಆರಂಭದ ವೇಳೆ ವ್ಯಕ್ತಪಡಿಸಿದ ದೃಷ್ಟಿಯಿಂದ ಪ್ರೇರಿತವಾಗಿದ್ದು, ಉದ್ಯಮಶೀಲತೆ ನಗರಗಳಿಗೆ ಮಾತ್ರ ಸೀಮಿತವಾಗದೇ ದೇಶದ ಪ್ರತಿಯೊಂದು ಭಾಗದಲ್ಲೂ ಬೆಳೆಯಬೇಕು ಎಂಬ ಉದ್ದೇಶ ಹೊಂದಿದೆ. ಯುವಕರು, ನವೋದ್ಯಮಿಗಳು ಮತ್ತು ಉದ್ಯೋಗ ಸೃಷ್ಟಿಕರ್ತರನ್ನು ಉತ್ತೇಜಿಸುವ ಮೂಲಕ ಸಣ್ಣ ಪಟ್ಟಣಗಳು, ಗ್ರಾಮೀಣ ಪ್ರದೇಶಗಳು ಮತ್ತು ಆಕಾಂಕ್ಷಿ ಜಿಲ್ಲೆಗಳಲ್ಲಿ ಸ್ಟಾರ್ಟ್ ಆಪ್‌ಗಳು ಉದಯಕ್ಕೆ ದಾರಿಯಾಗಲಿದೆ.
ಈ ಕಾರ್ಯಕ್ರಮವನ್ನು ದೇಶದಾದ್ಯಂತ 132 ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತಿದ್ದು, ಜಿಲ್ಲಾಮಟ್ಟದ ಕಾರ್ಯಾಗಾರಗಳ ಮೂಲಕ ತಳಮಟ್ಟದವರೆಗೆ ಸ್ಟಾರ್ಟ್ ಆಪ್ ಬೆಂಬಲವನ್ನು ತಲುಪಿಸಲಾಗುತ್ತದೆ. ಇದು ಸರ್ಕಾರದ ಯೋಜನೆಗಳ ಅರಿವು ಹೆಚ್ಚಿಸುವುದು, ಇಂಕ್ಯುಬೇಷನ್ ಮತ್ತು ಮಾರ್ಗದರ್ಶನ ಸೌಲಭ್ಯಗಳಿಗೆ ಪ್ರವೇಶ ಕಲ್ಪಿಸುವುದು, ಹಾಗೂ ಸ್ಥಳೀಯ ನವೋದ್ಯಮಿಗಳನ್ನು ಮಾರುಕಟ್ಟೆ ಅವಕಾಶಗಳೊಂದಿಗೆ ಸಂಪರ್ಕಿಸುವುದನ್ನು ಉದ್ದೇಶಿಸಿದೆ.
ರಾಯಚೂರಿನಲ್ಲಿ ತೇಜಸ್ ಕಾರ್ಯಾಗಾರ–ದೇಶದಲ್ಲೇ ಮೊದಲ ಬಾರಿ: ಈ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿ ಸ್ಟಾರ್ಟ್ ಆಪ್ ಇಂಡಿಯಾ, ಡಿಪಿಐಐಟಿ ಭಾರತ ಸರ್ಕಾರ, ಹಾಗೂ ಜಿಲ್ಲಾಡಳಿತ ರಾಯಚೂರು ಇವರ ಸಹಯೋಗದಲ್ಲಿ 2026ರ ಏಪ್ರಿಲ್ 2ರಂದು ತೇಜಸ್ ಸ್ಟಾರ್ಟ್ ಆಪ್ ಕಾರ್ಯಾಗಾರವನ್ನು ರಾಯಚೂರಿನಲ್ಲಿ ಆಯೋಜಿಸಲಾಗುತ್ತಿದೆ.
ವಿಶೇಷವಾಗಿ ಈ ಕಾರ್ಯಾಗಾರವು ದೇಶದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಆಯೋಜಿಸಲಾಗುತ್ತಿದ್ದು, ಇದು ಭಾರತದ ಉದ್ಯಮಶೀಲತೆಯನ್ನು ತಳಮಟ್ಟಕ್ಕೆ ತಲುಪಿಸುವ ಪ್ರಯತ್ನದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ರಾಯಚೂರು ಒಂದು ಆಕಾಂಕ್ಷಿ ಜಿಲ್ಲೆಯಾಗಿದ್ದು, ಅಪಾರ ಉದ್ಯಮಶೀಲ ಸಾಮರ್ಥ್ಯವನ್ನು ಹೊಂದಿದೆ. ಯುವಕರು, ಮಹಿಳೆಯರು ಮತ್ತು ಮೊದಲ ಬಾರಿಗೆ ಉದ್ಯಮ ಆರಂಭಿಸುವವರಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಬಲಿಷ್ಠ ಸ್ಟಾರ್ಟ್ ಆಪ್ ಪರಿಸರವನ್ನು ನಿರ್ಮಿಸಲು ಜಿಲ್ಲಾಡಳಿತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಕಾರ್ಯಾಗಾರವು ಆಸಕ್ತ ಉದ್ಯಮಿಗಳು, ವಿದ್ಯಾರ್ಥಿಗಳು, ನವೋದ್ಯಮಿಗಳು, ಕೈಗಾರಿಕಾ ತಜ್ಞರು ಮತ್ತು ಪರಿಸರ ಸಹಭಾಗಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ನೆಟ್ವರ್ಕಿಂಗ್ಗೆ ಅವಕಾಶ ಕಲ್ಪಿಸುತ್ತದೆ. ಪ್ರಮುಖ ಅಧಿವೇಶನಗಳು ಸ್ಟಾರ್ಟ್ ಆಪ್ ಆಲೋಚನೆ ರೂಪಿಸುವಿಕೆ, ವಿಸ್ತರಣೆ ತಂತ್ರಗಳು, ಹಣಕಾಸು ಅವಕಾಶಗಳು, ಇಂಕ್ಯುಬೇಷನ್ ಬೆಂಬಲ ಮತ್ತು ಸರ್ಕಾರದ ಯೋಜನೆಗಳ ಕುರಿತು ಕೇಂದ್ರೀಕರಿಸಲಿವೆ.
ಈ ಉಪಕ್ರಮವು ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು, ಹಣಕಾಸು ಸಂಸ್ಥೆಗಳು, ಇಂಕ್ಯುಬೇಟರ್ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ಸಹಭಾಗಿಗಳ ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ. ಜಿಲ್ಲಾಡಳಿತ, ರಾಯಚೂರು ಎಲ್ಲಾ ಆಸಕ್ತರು, ಉದ್ಯಮಶೀಲರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ತೇಜಸ್ ಕಾರ್ಯಾಗಾರವನ್ನು ರಾಯಚೂರಿನಲ್ಲಿ ಆಯೋಜಿಸಲಾಗುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈ ಐತಿಹಾಸಿಕ ಉಪಕ್ರಮದ ಮೂಲಕ ರಾಯಚೂರನ್ನು ತಳಮಟ್ಟದ ನವೀನತೆ ಮತ್ತು ಉದ್ಯಮಶೀಲತೆಯ ಪ್ರಮುಖ ಕೇಂದ್ರವಾಗಿ ರೂಪಿಸುವುದೇ ನಮ್ಮ ಉದ್ದೇಶವಾಗಿದೆ. ನಮ್ಮ ಯುವಕರ ಸಾಮರ್ಥ್ಯವನ್ನು ಹೊರತರಲು, ಮೊದಲ ತಲೆಮಾರಿನ ಉದ್ಯಮಿಗಳನ್ನು ಉತ್ತೇಜಿಸಲು ಹಾಗೂ ಸಮಗ್ರ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುವ ಬಲಿಷ್ಠ ಸ್ಟಾರ್ಟ್ ಆಪ್ ಪರಿಸರ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ

Leave a Reply

Your email address will not be published. Required fields are marked *