ಕಾರಟಗಿ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ರೈತನ ಭತ್ತದ ಬೆಳೆಗೆ ದುಷ್ಕರ್ಮಿಗಳು ಕಳೆನಾಶಕ ಎಣ್ಣೆ ಸಿಂಪಡಿಸಿ ಬೆಳೆ ಹಾನಿಗೊಳಪಡಿಸಿದ ಘಟನೆ ಬೆಳಕಿಗೆ ಬಂದಿದೆ.
ಸೋಮನಾಳ ಗ್ರಾಮದ ಸರ್ವೇ ನಂ.132ರಲ್ಲಿ ವೆಂಕನಗೌಡ ಬಸಾಪುರ ಅವರಿಗೆ ಸೇರಿದ ಹೊಲದಲ್ಲಿ ಬೆಳೆದಿದ್ದ ಭತ್ತವು ವಡೆ ಮತ್ತು ಕಾಳು ಕಟ್ಟುವ ಹಂತದಲ್ಲಿದ್ದ ಸಂದರ್ಭದಲ್ಲಿ ಅಪರಿಚಿತರು ರಾತ್ರಿ ವೇಳೆ ಹೊಲಕ್ಕೆ ನುಗ್ಗಿ “ರೌಂಡ್‌ಅಪ್” ಎಂಬ ಕಳೆನಾಶಕ ಎಣ್ಣೆಯನ್ನು ಸಿಂಪಡಿಸಿರುವುದಾಗಿ ತಿಳಿದುಬಂದಿದೆ. ಪರಿಣಾಮವಾಗಿ ಭತ್ತದ ಬೆಳೆ ನಿಧಾನವಾಗಿ ಒಣಗಲು ಆರಂಭವಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೆಳಿಗ್ಗೆ ಹೊಲಕ್ಕೆ ಬಂದ ರೈತ ವೆಂಕನಗೌಡ ಬಸಾಪುರ ಅವರು ಬೆಳೆ ಹಾನಿಯಾಗಿರುವುದನ್ನು ಗಮನಿಸಿ ಬೆಚ್ಚಿಬಿದ್ದಿದ್ದಾರೆ. ನಂತರ ಈ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ದುಷ್ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ. ರೈತನಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆದಿರುವ ಸಾಧ್ಯತೆ ಇದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಗ್ರಾಮದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಸುರಕ್ಷತೆ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

