ತಾಳಿಕೋಟಿ: ಸಮಾಜದ ಎಲ್ಲ ವರ್ಗದ ಜನರ ಸೇವೆಯನ್ನು ತಮ್ಮ ಫೌಂಡೇಶನ್ ದ ಮೂಲಕ ನಿಸ್ವಾರ್ಥದಿಂದ ಮಾಡುತ್ತಿರುವ ಸಿ.ಬಿ.ಅಸ್ಕಿ ಅವರ ಸಮಾಜ ಸೇವಾ ಕಾರ್ಯಗಳು ಎಲ್ಲರಿಗೂ ಅನುಕರಣೀಯವಾಗಿವೆ ಎಂದು ರೈತ ಮುಖಂಡ ಶಿವರಾಜ ಗುಂಡಕನಾಳ ಹೇಳಿದರು. ಪಟ್ಟಣದ ಹಳೇ ತರಕಾರಿ ಮಾರುಕಟ್ಟೆ ಮೈದಾನದಲ್ಲಿ ಶುಕ್ರವಾರ ಸಂಜೆ ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಆಯೋಜಿಸಿದ ಸೌಹಾರ್ದ ಇಫ್ತಾರ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತ ಮುಖಂಡ ಜೈಭೀಮ ಮುತ್ತಗಿ ಮಾತನಾಡಿ ಪವಿತ್ರ ರಮಜಾನ್ ಮಾಸದ ಉಪಾಸ ವೃತಗಳ ಆಚರಣೆಯಿಂದ ದೇಹ ಮತ್ತು ಮನಸ್ಸುಗಳೆರಡೂ ಪರಿಶುದ್ಧವಾಗುತ್ತವೆ. ಉಪವಾಸಗರಿಗೆ ಭೋಜನದ ವ್ಯವಸ್ಥೆ ಮಾಡುವವರಿಗೆ ಉಪಾಸ ಇರುವ ವ್ಯಕ್ತಿಗೆ ಸಿಗುವಷ್ಟೇ ಪುಣ್ಯ ಸಿಗುತ್ತದೆ ಎಂದು ಪ್ರವಾದಿಗಳು ಹೇಳಿದ್ದಾರೆ ಇಂತಹ ಪುಣ್ಯದ ಕಾರ್ಯವನ್ನು ಅಸ್ಕಿ ಯವರು ಕಳೆದ ಎಂಟು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ ಅವರ ಒಳ್ಳೆಯ ಕೆಲಸಗಳಿಗೆ ನಾವೆಲ್ಲರೂ ಸಹಕರಿಸೋಣ ಎಂದರು. ಯುವ ಮುಖಂಡ ವಿಜಯಸಿಂಗ್ ಹಜೇರಿ ಮಾತನಾಡಿ ಯಾವುದೇ ರಾಜಕೀಯ ಸ್ವಾರ್ಥ ಇಲ್ಲದೆ ಸಮಾಜದ ಎಲ್ಲ ವರ್ಗದ ಜನರ ಸೇವೆಯನ್ನು ಅಸ್ಕಿ ಅವರು ಮಾಡುತ್ತಿದ್ದಾರೆ ಅವರೊಬ್ಬ ಮಾತೃ ಹೃದಯ ಹೊಂದಿದ ವ್ಯಕ್ತಿಯಾಗಿದ್ದಾರೆ ಅವರಿಗೆ ನಾವೆಲ್ಲರೂ ಪ್ರೋತ್ಸಾಹಿಸೋಣ ಎಂದರು. ಸಮಾಜ ಸೇವಕರಾದ ವಿರೇಶಗೌಡ ಬಾಗೇವಾಡಿ, ಶಮಶುದ್ದೀನ ನಾಲಬಂದ ಹಾಗೂ ಇಬ್ರಾಹೀಮ ಮನ್ಸೂರ ಮಾತನಾಡಿದರು. ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಸ್ತ ಮುಸ್ಲಿಂ ಸಮಾಜ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಫೌಂಡೇಶನ್ ವತಿಯಿಂದ ಸಿ.ಬಿ.ಅಸ್ಕಿ ಅವರನ್ನು ಗೌರವಿಸಲಾಯಿತು. ಪಟ್ಟಣದ ಎಲ್ಲ ಸಮಾಜದ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಸೌಹಾರ್ದ ಇಫ್ತಾರ ಸಾಮೂಹಿಕ ಭೋಜನಕೂಟದಲ್ಲಿ ಭಾಗವಹಿಸಿ ಭಾವೈಕ್ಯತೆಯನ್ನು ಮೆರೆದರು. ಕಾರ್ಯಕ್ರಮದಲ್ಲಿ ಗಣ್ಯರಾದ ಎಸ್.ಬಿ.ಕಟ್ಟಿಮನಿ, ಮಾಸೂಮಸಾಬ ಕೆಂಭಾವಿ, ನಿರಂಜನಶಾ ಮಕಾಂದಾರ,ಕೆ.ಐ.ಸಗರ, ಮಹೆಬೂಬ ಚೋರಗಸ್ತಿ, ಕಾಸೀಮ ಪಟೇಲ, ಮುಸ್ಲಿಮ್ ಬ್ಯಾಂಕ್ ಅಧ್ಯಕ್ಷ ಮಹಿಬೂಬ ಕೆಂಬಾವಿ, ಫಯಾಜ ಉತ್ನಾಳ, ರವಿ ಕಟ್ಟಿಮನಿ, ಸಿಕಂದರ ಡೋಣಿ, ಹುಸೇನ ಭಾಷಾ ಜಮಾದಾರ,ಮೋದಿನಸಾ ನಗಾರ್ಚಿ,ಡಾ.ನಜೀರ ಕೋಳ್ಯಾಳ,ಆನಂದ ಮದರಕಲ್ಲ, ಅಬೂಬಕರ ಲಾಹೋರಿ, ಆಸೀಫ ಕೆಂಭಾವಿ, ಗೋಪಾಲ್ ಕಟ್ಟಿಮನಿ, ಬಸ್ಸು ಮಾದರ, ನಬಿ ಲಾಹೋರಿ ಶೌಕತ್ ಲಾಹೋರಿ,ಜಾವೀದ ಕೆಂಭಾವಿ, ವೀರೇಶ್ ಅಸ್ಕಿ ಹಾಗೂ ಫೌಂಡೇಶನ್ ಪದಾಧಿಕಾರಿಗಳು ಇದ್ದರು.


