ಜಾಲಹಳ್ಳಿ : ಗ್ರಾಮದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಭಾವನಾತ್ಮಕವಾಗಿ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಾದ ಸುರೇಶ್ ಹಾಗೂ ಶ್ರೀನಿವಾಸ್ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಾಲೆಯ ಮುಖ್ಯ ಗುರುಗಳಾದ ಶ್ರೀ ನಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಸರಸ್ವತಿ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಮಾಡಿದ ಹಿಂದಿ ಶಿಕ್ಷಕರಾದ ಶ್ರೀ ಚಿತ್ತಾವಲಿ ಅವರು ಮಾತನಾಡಿ, ಹತ್ತನೇ ತರಗತಿ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಹಂತವಾದ ಕಾಲೇಜು ಜೀವನದತ್ತ ಹೆಜ್ಜೆ ಇಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. 2025–26ನೇ ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸವಾಲಿನ ವರ್ಷವಾಗಿದ್ದು, ವಿದ್ಯಾರ್ಥಿಗಳಿಗೆ ಬೆಳಗ್ಗೆ 8:45ರಿಂದ ಸಂಜೆ 5:00ರವರೆಗೆ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಪುಸ್ತಕ ಜ್ಞಾನ ಮಾತ್ರವಲ್ಲದೆ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಕೂಡ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ ಎಂದು ಹೇಳಿದರು.
ಪರೀಕ್ಷೆಯಲ್ಲಿ ಅಂಕಗಳು ಎಷ್ಟು ಮುಖ್ಯವೋ, ಮೌಲ್ಯಗಳು ಕೂಡ ಅಷ್ಟೇ ಮುಖ್ಯವೆಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಎಲ್ಲರೊಂದಿಗೆ ಗೌರವದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು. ಈ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುತ್ತಿದ್ದು ಉತ್ತಮ ಫಲಿತಾಂಶ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಜೀವನದಲ್ಲಿ ಎರಡು ಕಾಗದಗಳು ಮುಖ್ಯ — ಒಂದು ಕಾಗದದ ಹಣ, ಇನ್ನೊಂದು ಪುಸ್ತಕ. ನಾವು ಪುಸ್ತಕವನ್ನು ಆಯ್ಕೆ ಮಾಡಿದರೆ ಹಣ ಸ್ವತಃ ಬರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ತಂದೆ-ತಾಯಿಗಳು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದು ಅವರ ಹೆಸರನ್ನು ಬೆಳಗಿಸಬೇಕು ಎಂದು ಹೇಳಿದರು.
ನಿವೃತ್ತ ಪ್ರಿನ್ಸಿಪಾಲರಾದ ಶ್ರೀ ಉಮೇಶ್ ಹೆಸರೂರು ಮಾತನಾಡಿ, ಜಾಲಹಳ್ಳಿ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಉತ್ತಮ ಶಿಕ್ಷಕ ವೃಂದವಿದ್ದು ಈ ವರ್ಷ ಉತ್ತಮ ಫಲಿತಾಂಶ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಕರ್ತರಾದ ಗಿರಿಯಪ್ಪ ಪೂಜಾರಿ ಮಾತನಾಡಿ, ಶಾಲೆಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ಅವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶ ತಂದು ಶಾಲೆ ಹಾಗೂ ಗ್ರಾಮದ ಹೆಸರನ್ನು ಬೆಳಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಲಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್ ಖುರೇಶಿ ಅವರು ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದಂತೆ, ವಿದ್ಯಾರ್ಥಿ ಅಯ್ಯನಗೌಡ ವಿಜಯಕುಮಾರ್ ಅವರು ಐದು ವಿಷಯಗಳಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದ ಹಿನ್ನೆಲೆಯಲ್ಲಿ ₹5000 ಬಹುಮಾನ ನೀಡಿ ಸನ್ಮಾನಿಸಲಾಯಿತು.
ಇನ್ನೊಬ್ಬ ವಿದ್ಯಾರ್ಥಿಯಾದ ಸಾಬಣ್ಣ ಮುರುಗಪ್ಪ ಅವರು ಕನ್ನಡ ವಿಷಯದಲ್ಲಿ 125ರಲ್ಲಿ 123 ಅಂಕ ಪಡೆದಿದ್ದರಿಂದ ಅವರಿಗೆ ₹1000 ಬಹುಮಾನ ನೀಡಿ ಗೌರವಿಸಲಾಯಿತು. ಅಬ್ದುಲ್ ರೆಹಮಾನ್ ಖುರೇಶಿ ಅವರ ಈ ಕಾರ್ಯಕ್ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಬ್ದುಲ್ ರೆಹಮಾನ್ ಖುರೇಶಿ ಮಾತನಾಡಿ, ವಿದ್ಯಾರ್ಥಿಗಳು ಸಹೋದರತ್ವದ ಭಾವನೆಯೊಂದಿಗೆ ಬೆಳೆದು ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಗದ್ಯಪ್ಪ ಅವರು ವಿದ್ಯಾರ್ಥಿಗಳೊಂದಿಗೆ ಕಳೆದ ದಿನಗಳ ನೆನಪುಗಳನ್ನು ಹಂಚಿಕೊಂಡರು.
ಸಿಆರ್‌ಪಿ ಪಶ್ಚಿಮ ವಲಯದ ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿ ಉತ್ತಮ ಫಲಿತಾಂಶ ತರುವಂತೆ ಸಲಹೆ ನೀಡಿದರು.
ಶ್ರೀ ರಾಘವೇಂದ್ರ ಕುಲಕರ್ಣಿ, ಕಂಪ್ಯೂಟರ್ ತರಬೇತಿದಾರರು (ದೇವದುರ್ಗ) ಅವರು ಜಾಲಹಳ್ಳಿ ಸರಕಾರಿ ಬಾಲಕರ ಪ್ರೌಢಶಾಲೆಗೆ ಒಂದು ಲ್ಯಾಪ್‌ಟಾಪ್ ಅನ್ನು ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಹತ್ತನೇ ತರಗತಿ ವಿದ್ಯಾರ್ಥಿಗಳು
ಬೀಳ್ಕೊಡು ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಜಾಲಹಳ್ಳಿಯ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ನಿಂಗಪ್ಪ ಹಾಗೂ ಎಲ್ಲಾ ಶಿಕ್ಷಕರು ವೃಂದದ ಬೋಧನೆ ಹಾಗೂ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಅಭಿನಂದನೆಗಳ ಮಹಾಪೂರವನ್ನು ಹರಿಸಿದರು
ಇದೇ ಸಂದರ್ಭದಲ್ಲಿ ಅತಿಥಿ ಶಿಕ್ಷಕರನ್ನು ಸನ್ಮಾನಿಸಲಾಯಿತು
ಪತ್ರಕರ್ತರಾದ ಮಾಲಿಂಗ ದೊಡ್ಡಮನಿ ಹಾಗೂ ರಾಜನ ಗೌಡ್ರು ವಿದ್ಯಾರ್ಥಿಗಳ ಮುಂದಿನ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ
ಶ್ರೀ ನಿಂಗಪ್ಪ
ಮುಖ್ಯ ಗುರುಗಳು, ಸರಕಾರಿ ಬಾಲಕರ ಪ್ರೌಢಶಾಲೆ ಜಾಲಹಳ್ಳಿ
ಮುಖ್ಯ ಅತಿಥಿಗಳು
ಶ್ರೀಮತಿ ವಿಜಯಲಕ್ಷ್ಮಿ ವೆಂಕುಬ ತೋಟದ – ಗ್ರಾಮ ಪಂಚಾಯತ್ ಅಧ್ಯಕ್ಷರು, ಜಾಲಹಳ್ಳಿ
ಶ್ರೀ ವೀರೇಶ್ ಅರಕೇರಿ – ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಜಾಲಹಳ್ಳಿ
ಶ್ರೀ ಉಮೇಶ್ ಹೆಸರೂರು – ನಿವೃತ್ತ ಪ್ರಿನ್ಸಿಪಾಲರು ಜಾಲಹಳ್ಳಿ
ಶ್ರೀ ರಾಜನ ಗೌಡ – ಇಸಿಒ, ಜಾಲಹಳ್ಳಿ
ಶ್ರೀ ರಾಘವೇಂದ್ರ ಕುಲಕರ್ಣಿ – ಕಂಪ್ಯೂಟರ್ ತರಬೇತಿದಾರರು, ದೇವದುರ್ಗ
ಶ್ರೀ ಸೋಮಶೇಖರ್ – ಸಿಆರ್‌ಪಿ ಪಶ್ಚಿಮ ವಲಯ, ಜಾಲಹಳ್ಳಿ
ಶ್ರೀ ಕೃಷ್ಣಮೂರ್ತಿ – ಸಿಆರ್‌ಪಿ, ಗಾಣದಾಳ
ಶ್ರೀ ಅಬ್ದುಲ್ ರೆಹಮಾನ್ ಖುರೇಶಿ – ಗ್ರಾಮ ಪಂಚಾಯತ್ ಸದಸ್ಯರು ಜಾಲಹಳ್ಳಿ
ಶ್ರೀ ಪ್ರಕಾಶ್ – ಪ್ರಥಮ ದರ್ಜೆ ಸಹಾಯಕರು, ಜಿಪಿಯು ಕಾಲೇಜ್ ಜಾಲಹಳ್ಳಿ
ಶ್ರೀ ಶಿವು ಮೆಣಸಿನಕಾಯಿ – ಗ್ರಾಮದ ಹಿರಿಯರು
ಅತಿಥಿಗಳು
ಗಿರಿಯಪ್ಪ ಪೂಜಾರಿ – ಪತ್ರಕರ್ತರು
ಖಾಜಾ ಹುಸೇನ್ ಬಾಬಾ – ವರದಿಗಾರರುTv20 ಕನ್ನಡ ನ್ಯೂಸ್ ಚಾನೆಲ್
ಮಾಲಿಂಗ ದೊಡ್ಡಮನಿ – ಪತ್ರಕರ್ತರು
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

