ಮಾನ್ವಿ : ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಗಣಿ ದಂಡ ಅಕ್ರಮ ಹಾಗೂ ಸರ್ಕಾರಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಸೇವಕ ಗುರುರಾಜ ನಾಗಲಾಪುರ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ದೂರು ಸಲ್ಲಿಸಿದರು. ಈ ವೇಳೆ ಅಕ್ರಮ ಗಣಿಗಾರಿಕೆ, ದಂಡ ಕಡಿತ ಮತ್ತು ಸರ್ಕಾರಿ ಜಮೀನು ಒತ್ತುವರಿ ಕುರಿತ ಸಂಪೂರ್ಣ ವಿವರಗಳನ್ನು ಮನವಿಯ ಮೂಲಕ ಅವರ ಗಮನಕ್ಕೆ ತಂದರು.
ಉಪವಾಸ ಸತ್ಯಾಗ್ರಹಕ್ಕೂ ಬೆಲೆ ನೀಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗುರುರಾಜ ನಾಗಲಾಪುರ, ಮಾನ್ವಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಗಣಿಗಾರಿಕೆ ಸ್ಥಗಿತಗೊಳಿಸಿ ದಂಡ ವಸೂಲಿ ಮಾಡುವುದಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ ಹಲವು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತದ ಅಧಿಕಾರಿಗಳು ಅಕ್ರಮ ಕಂಪನಿಯೊಂದಿಗೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಇನ್ನೂ ಐಎಎಸ್ ಅಧಿಕಾರಿ ಗಜಾನನ ಬಾಳೆ ಅವರ ತಂಡ ವಿಧಿಸಿದ್ದ ₹1.88 ಕೋಟಿ ದಂಡವನ್ನು ನಿಯಮಬಾಹಿರವಾಗಿ ₹1.06 ಕೋಟಿಗೆ ಇಳಿಸಿ ಸರ್ಕಾರಕ್ಕೆ ₹82 ಲಕ್ಷ ನಷ್ಟ ಉಂಟುಮಾಡಲಾಗಿದೆ. ಹಿರಿಯ ಭೂವಿಜ್ಞಾನಿ ಮುತ್ತಪ್ಪ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಂಜೂರಾದ 5 ಎಕರೆ ಬದಲು 6 ಎಕರೆ 14 ಗುಂಟೆ ಸರ್ಕಾರಿ/ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಯಾವುದೇ ಪರವಾನಗಿ ಇಲ್ಲದೆ ಅಕ್ರಮ M-Sand ಘಟಕ ನಡೆಸುತ್ತಿರುವುದನ್ನು ತಕ್ಷಣ ತಡೆಯಬೇಕು. ಈ ಕುರಿತು ಸದನದಲ್ಲಿ ಧ್ವನಿ ಎತ್ತಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮನವಿ ಸ್ವೀಕರಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರಕರಣದ ಬಗ್ಗೆ ಸರ್ಕಾರದ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಪೀಡಿತ ಗ್ರಾಮಸ್ಥರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

