ಮಸ್ಕಿ: ಒಂದು ಕಡೆ ಬರಬೇಕಾದ ಆರ್ ಟಿ ಇ ಶುಲ್ಕ ಮರುಪಾವತಿ ಹಣಕ್ಕಾಗಿ ಅಲೆಯುತ್ತಿರುವ ಖಾಸಗಿ ಶಾಲೆಗಳು, ಇನ್ನೊಂದು ಕಡೆ ‘ಇಂದೇ ಹಣ ಕಟ್ಟಿ, ಇಲ್ಲದಿದ್ದರೆ ಪುಸ್ತಕವಿಲ್ಲ’ ಎಂಬ ಸರ್ಕಾರದ ಖಡಕ್ ಎಚ್ಚರಿಕೆ! ಇದು ರಾಜ್ಯ ಪಠ್ಯಕ್ರಮದ ಅನುದಾನರಹಿತ ಶಾಲೆಗಳು ಇಂದು ಎದುರಿಸುತ್ತಿರುವ ಧರ್ಮಸಂಕಟ.

ಬಾಕಿ ಉಳಿದ ಕೋಟಿ ಕೋಟಿ ಹಣ:
ಕಳೆದ ಸಾಲಿನ ಹಾಗೂ ಪ್ರಸಕ್ತ ಸಾಲಿನ ಆರ್.ಟಿ.ಇ (RTE) ಶುಲ್ಕ ಮರುಪಾವತಿ ಹಣವನ್ನು ಸರ್ಕಾರ ಇದುವರೆಗೂ ಬಹುತೇಕ ಶಾಲೆಗಳಿಗೆ ಬಿಡುಗಡೆ ಮಾಡಿಲ್ಲ. ಗ್ರಾಮೀಣ ಭಾಗದ ಸಣ್ಣ ಶಾಲೆಗಳು ಶಿಕ್ಷಕರ ಸಂಬಳ ಮತ್ತು ಕಟ್ಟಡದ ಬಾಡಿಗೆ ಕಟ್ಟಲು ಪರದಾಡುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ, 2026-27ನೇ ಸಾಲಿನ ಪಠ್ಯಪುಸ್ತಕಗಳ ಒಟ್ಟು ಮೊತ್ತದ ಶೇಕಡಾ 25ರಷ್ಟು ಮುಂಗಡ ಹಣವನ್ನು ಇಂದೇ (ದಿನಾಂಕ 10-03-2026) 2 ಗಂಟೆಯೊಳಗೆ ಆದೇಶ (ವಾಟ್ಸಪ್ ಸಂದೇಶ )ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ .

ಕೇಂದ್ರೀಯ ಪಠ್ಯಕ್ರಮಕ್ಕೊಂದು ನ್ಯಾಯ, ರಾಜ್ಯ ಪಠ್ಯಕ್ರಮಕ್ಕೊಂದು ನ್ಯಾಯ ?
ಕೇಂದ್ರೀಯ ಪಠ್ಯಕ್ರಮದ (CBSE/ICSE) ಶಾಲೆಗಳಿಗೆ ಮುಕ್ತ ಗುಣಮಟ್ಟದ ಪುಸ್ತಕಗಳನ್ನು ಖರೀದಿಸಲು ಅವಕಾಶವಿದೆ. ಆದರೆ ರಾಜ್ಯ ಪಠ್ಯಕ್ರಮದ ಶಾಲೆಗಳನ್ನು ಕೇವಲ ಸರ್ಕಾರಿ ಪೂರೈಕೆಯ ಮೇಲೆ ಅವಲಂಬಿತವಾಗುವಂತೆ ಮಾಡಿ, ಈಗ ಮುಂಗಡ ಹಣಕ್ಕಾಗಿ ಒತ್ತಾಯಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಡೆಸುತ್ತಿರುವ ವ್ಯವಸ್ಥಿತ ಆರ್ಥಿಕ ಕಿರುಕುಳವಾಗಿದೆ.

“ಇದು ಶಿಕ್ಷಣ ಸಂಸ್ಥೆಗಳ ಶೋಷಣೆ”
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿರಿಯ ನ್ಯಾಯವಾದಿಗಳು ಹಾಗೂ ರಾಯಚೂರು ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಮಸ್ಕಿ ಅವರು, ಸರ್ಕಾರದ ಈ ದ್ವಂದ್ವವನ್ನು ಪ್ರಶ್ನಿಸಿದ್ದಾರೆ.

“ಸರ್ಕಾರವು ಶಾಲೆಗಳಿಗೆ ನೀಡಬೇಕಾದ ಆರ್.ಟಿ.ಇ ಬಾಕಿ ಹಣವನ್ನು ನೀಡದೆ, ಮುಂಗಡವಾಗಿ ಹಣ ತುಂಬಲು ಸೂಚಿಸಲಾಗಿದೆ. ಇಂದೇ ಹಣ ಇಲ್ಲವಾದರೆ ಪುಸ್ತಕಗಳನ್ನು ಮುದ್ರಿಸುವುದಿಲ್ಲ ಎಂಬ ಬೆದರಿಕೆ ತಂತ್ರವು ಸರಿಯಲ್ಲ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ತಕ್ಷಣವೇ ಬಾಕಿ ಇರುವ ಆರ್.ಟಿ.ಇ ಬಿಡುಗಡೆ ಮಾಡಬೇಕು ತದನಂತರ ಹಣ ಪಾವತಿಗೆ ಅವಕಾಶ ನೀಡಬೇಕು. ರಾಜ್ಯ ಪಠ್ಯಕ್ರಮಗಳ ಶಾಲೆಗಳಿಗೂ ಕೂಡ ಕೇಂದ್ರೀಯ ಪಠ್ಯಕ್ರಮದಂತೆ ಪುಸ್ತಕಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಅವಕಾಶ ಮಾಡಿಕೊಡಬೇಕು ,” ಎಂದು ಅವರು ಹೇಳಿದ್ದಾರೆ.

ಮುಂದೆನು?
ಸರ್ಕಾರದ ಈ ಹಠಮಾರಿ ಧೋರಣೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಮತ್ತು ನೂರಾರು ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ . ಕೂಡಲೇ ಶಿಕ್ಷಣ ಇಲಾಖೆಯು ಈ ಗಡುವನ್ನು ವಿಸ್ತರಿಸಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿರುವ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಶಾಲೆಗಳಿಗೆ ನೆರವಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಒಕ್ಕೂಟವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ, ಕೂಡಲೇ ಸರ್ಕಾರವು ಪುಸ್ತಕಗಳ ಮುಂಗಡ ಪಾವತಿಯ ಅವಧಿಯನ್ನು ವಿಸ್ತರಿಸಬೇಕು ಮತ್ತು ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಕೇಂದ್ರೀಯ ಪಠ್ಯಕ್ರಮದಂತೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಬಾಕಿ ಇರುವ ಆರ್.ಟಿ.ಇ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು

*ನಾಗರಾಜ ಮಸ್ಕಿ
ಹಿರಿಯ ನ್ಯಾಯವಾದಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು, ರಾಯಚೂರು ಜಿಲ್ಲೆ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರಿ).

Leave a Reply

Your email address will not be published. Required fields are marked *