ಅತ್ತ ಸೂರ್ಯ ತನ್ನ ಕೆಲಸ ಮುಗಿಸಿ ಪಡುವಣದತ್ತ ಸಾಗುತ್ತಿದ್ದಂತೆಯೇ ಇತ್ತ ನಗರದ ಪ್ರಸಿದ್ಧ ಧಾರ್ಮಿಕ ತಾಣ ಶರಣಬಸವೇಶ್ವರ ದೇವಸ್ಥಾನದಲ್ಲಿ ‘ಶರಣಬಸವೇಶ್ವರ ಮಹಾರಾಜ್ ಕಿ ಜೈ’ ಎಂಬ ಘೋಷದೊಂದಿಗೆ ಶನಿವಾರ ಉಚ್ಚಾಯವು (ಸಣ್ಣ ತೇರಿನ ರಥೋತ್ಸವ) ಸಡಗರ ಸಂಭ್ರಮದಿಂದ ನೆರವೇರಿತು.8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅನುಪಸ್ಥಿತಿಯಲ್ಲಿ ನಡೆದ ಮೊದಲ ಜಾತ್ರೆ ಇದಾಗಿದ್ದು, ಭಕ್ತರು ಅಪ್ಪ ಅವರನ್ನು ನೆನಪಿಸಿಕೊಳ್ಳುತ್ತಲೇ ಉಚ್ಚಾಯಕ್ಕೆ ಸಾಕ್ಷಿಯಾದರು.

ಸಂಜೆಯಾಗುತ್ತಿದ್ದಂತೆಯೇ ನಗರದ ಎಲ್ಲ ರಸ್ತೆಗಳೂ ಶರಣನ ಗುಡಿಯತ್ತ ಸಾಗಿದವು. ಭಕ್ತರು ಕಾಲ್ನಡಿಗೆಯಲ್ಲಿಯೇ ತಮ್ಮ ಮಕ್ಕಳನ್ನು ಕರೆದುಕೊಂಡು ದೇವಸ್ಥಾನದತ್ತ ಸಾಗಿದರು. ಅದಾಗಲೇ ಪೊಲೀಸರು ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಮಾಡಿದ್ದರು. ಉಚ್ಚಾಯದ ತೇರನ್ನು ಎಳೆಯುವವರು ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವವರು ಮಾತ್ರ ತೇರು ಸಾಗುವ ಮಾರ್ಗದಲ್ಲಿ ಸೇರಿದ್ದರು. ತೇರಿನ ಅಲಂಕಾರ ಮುಗಿದ ಬಳಿಕ ಪುರವಂತರು ತೇರಿನ ಎದುರು ತಮ್ಮ ಕಸರತ್ತು ಪ್ರದರ್ಶಿಸಿದರು. ಮಂಗಳವಾದ್ಯಗಳು ನಿರಂತರವಾಗಿ ಮೊಳಗುತ್ತಿದ್ದವು. ಅಷ್ಟರಲ್ಲಿಯೇ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರು ಮಹಾಮನೆಯಿಂದ ತೇರಿನತ್ತ ಮೆರವಣಿಗೆಯಲ್ಲಿ ಬಂದರು. ಅವರೊಂದಿಗೆ ದೊಡ್ಡಪ್ಪ ಅಪ್ಪ ಅವರ ತಾಯಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಮಹಾಮನೆಯ ಸದಸ್ಯರು ಜೊತೆಯಾಗಿ ಬಂದರು.

ದೊಡ್ಡಪ್ಪ ಅಪ್ಪ ಅವರ ತೇರಿನ ಬಳಿ ಬಂದು ಪೂಜೆ ಸಲ್ಲಿಸುತ್ತಿದ್ದಂತೆಯೇ ಉಚ್ಚಾಯ ರಥೋತ್ಸವ ಶುರುವಾಯಿತು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಶರಣಬಸವೇಶ್ವರ ಮಹಾರಾಜ್ ಕಿ ಜೈ, ಶರಣಬಸವಪ್ಪ ಅಪ್ಪ ಮಹಾರಾಜ್ ಕಿ ಜೈ, ದೊಡ್ಡಪ್ಪ ಅಪ್ಪ ಮಹಾರಾಜ್ ಕಿ ಜೈ ಎಂದು ಘೋಷಣೆಗಳನ್ನು ಕೂಗುತ್ತಾ ರಥದತ್ತ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥದೊಂದಿಗೆ ಶರಣಬಸವೇಶ್ವರರನ್ನು ಹೊತ್ತ ಪಲ್ಲಕ್ಕಿಯೂ ಸಾಗಿತು. ಪಾದಗಟ್ಟೆಯ ಬಳಿ ರಥ ನಿಂತ ಬಳಿಕ ಪಲ್ಲಕ್ಕಿಯು ಆವರಣವನ್ನು ಸಂಚರಿಸಿ ವಾಪಸ್ ಬಂತು. ಅದರ ಜೊತೆಯೇ ರಥವು ಹೊರಟು ತನ್ನ ಸ್ವಸ್ಥಾನವನ್ನೂ ಸೇರಿತು.

ನಂತರ ಭಕ್ತರು ಕಾಯಿ, ಕರ್ಪೂರ, ಊದಿನ ಕಡ್ಡಿ, ಹೂಗಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಭಕ್ತಿ ಸಮರ್ಪಿಸಿದರು. ಭಕ್ತರಿಗಾಗಿ ಸಂಸ್ಥಾನದ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಂದ ಎಲ್ಲ ಭಕ್ತರು ಪ್ರಸಾದ ಸ್ವೀಕರಿಸಿ ಹೋಗಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಧ್ವನಿವರ್ಧಕದಲ್ಲಿ ಮನವಿ ಮಾಡಿಕೊಂಡರು.

ಕಳೆದ ಬಾರಿ ರಥೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಯುಕ್ತ ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಡಿಸಿಪಿ ಪ್ರವೀಣ ನಾಯಕ್, ಎಸಿಪಿಗಳಾದ ಶರಣಬಸಪ್ಪ ಸುಬೇದಾರ್, ಸುಧಾ ಆದಿ, ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಗೃಹ ರಕ್ಷಕ ದಳದ ಸಿಬ್ಬಂದಿ, ಟ್ರಾಫಿಕ್ ವಾರ್ಡನ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಇಂದು ಸಂಜೆ ಶರಣಬಸವೇಶ್ವರರ ರಥೋತ್ಸವ

ಇದೇ 8ರಂದು ಸಂಜೆ 6ಕ್ಕೆ ಶರಣಬಸವೇಶ್ವರರ 204ನೇ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವ ಜರುಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಾತ್ರೆಯ ಅಂಗವಾಗಿ ದೇವಸ್ಥಾನದ ಮುಖ್ಯ ಕಟ್ಟಡ ಹಾಗೂ ಮಹಾಮನೆಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ಬಂದೋಬಸ್ತ್ ಮಾಡಲಾಗುತ್ತಿದೆ. ಶರಣಬಸವೇಶ್ವರರು ದಾಸೋಹಕ್ಕೆ ಹೆಸರುವಾಸಿಯಾಗಿದ್ದರು. ಅದಕ್ಕಾಗಿ ಶರಣಬಸವೇಶ್ವರ ಸಂಸ್ಥಾನ ಅಷ್ಟೇ ಅಲ್ಲದೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದಾಸೋಹ ವ್ಯವಸ್ಥೆ ಮಾಡುತ್ತಾರೆ. ಹೀಗಾಗಿ ಶರಣಬಸವೇಶ್ವರ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ದಾಸೋಹಕ್ಕಾಗಿ ಶಾಮಿಯಾನಗಳನ್ನು ಹಾಕಲಾಗಿದೆ. ಜಾತ್ರೆಯಲ್ಲಿ ಕಳ್ಳತನ ‍ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಸ್ಥಳೀಯ ಪೊಲೀಸರ ಜೊತೆಗೆ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶದ ಪೊಲೀಸ್ ಸಿಬ್ಬಂದಿಯನ್ನು ಕರೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *