ಸಿಂಧನೂರು: ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಸಿಂಧನೂರು ಹಾಗೂ ಜಿ.ಐ.ಓ (GIO) ಸಿಂಧನೂರು ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಾರ್ಚ್ 6, 2026 ರಂದು ಪಟ್ಟಣದ ಪಟೇಲ್ ವಾಡಿಯ ಮಸ್ಜಿದ್-ಎ-ಹುದಾ ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ಜೀವನ ಜ್ಯೋತಿ (ಗೈನಕಾಲಜಿಸ್ಟ್, CMC ತುರವಿಹಾಲ್ ಹಾಗೂ ಸ್ಪರ್ಶಾ ಮದರ್ ಅಂಡ್ ಚೈಲ್ಡ್ ಆಸ್ಪತ್ರೆ), ಶ್ರೀಮತಿ ಶೋಭಾ ದೇವಿ ವಸ್ತ್ರದ್ (ಸಿಂಧನೂರು) ಹಾಗೂ ಶ್ರೀಮತಿ ಹುಲಿಗೆಮ್ಮ (ಹೆಡ್ ಕಾನ್ಸ್ಟೇಬಲ್, ಸಿಂಧನೂರು) ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಶ್ರೀಮತಿ ಆಯಿಶಾ (ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋತ್ನಾಳ್ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕರು, ಪೋತ್ನಾಳ್) ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಘಟಕ ಅಧ್ಯಕ್ಷೆಯರಾದ ಸುಮಯ್ಯ ಬೇಗಮ್, ಕಾರ್ಯದರ್ಶಿಯಾದ ಅತಿಯಾ ಫೌಝಿಯಾ ಹಾಗೂ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ (GIO) ಸ್ಥಾನೀಯ ಅಧ್ಯಕ್ಷೆಯರಾದ ನೇಹಾ ಸಮ್ರೀನ್ ಉಪಸ್ಥಿತರಿದ್ದರು.
ತಮ್ಮ ಭಾಷಣದಲ್ಲಿ ಶ್ರೀಮತಿ ಆಯಿಶಾ ಅವರು ಸೌಹಾರ್ದ ಇಫ್ತಾರ್ ಕೂಟದ ಉದ್ದೇಶವನ್ನು ವಿವರಿಸಿ, ಇಂದಿನ ಸಮಾಜದಲ್ಲಿ ಮನುಷ್ಯ ಮನುಷ್ಯರ ನಡುವೆ ದ್ವೇಷ ಹೆಚ್ಚುತ್ತಿರುವ ಸಂದರ್ಭದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವವನ್ನು ಬೆಳೆಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ರಂಜಾನ್ ತಿಂಗಳಲ್ಲಿ ಉಪವಾಸವು ಪ್ರತಿಯೊಬ್ಬ ಮುಸ್ಲಿಮರ ಮೇಲೆ ಕಡ್ಡಾಯವಾಗಿದ್ದು, ಅದರ ಮುಖ್ಯ ಉದ್ದೇಶ ದೇವಭಯ ಮತ್ತು ಆತ್ಮ ನಿಯಂತ್ರಣವನ್ನು ಬೆಳೆಸುವುದಾಗಿದೆ ಎಂದು ತಿಳಿಸಿದರು.
ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಅನೇಕ ದೌರ್ಜನ್ಯಗಳು, ಭ್ರಷ್ಟಾಚಾರ, ಮೋಸ, ವಂಚನೆ ಹಾಗೂ ಕ್ರೌರ್ಯಗಳಿಗೆ ಮೂಲ ಕಾರಣ ದೇವಭಯ ಮತ್ತು ಆತ್ಮ ನಿಯಂತ್ರಣದ ಕೊರತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರಂಜಾನ್ ಉಪವಾಸವು ಮನುಷ್ಯನಿಗೆ ದೇವಭಯ ಮತ್ತು ಆತ್ಮ ನಿಯಂತ್ರಣದ ಮಹತ್ವವನ್ನು ಕಲಿಸುವ ಒಂದು ತರಬೇತಿಯಾಗಿದೆ. ಅಲ್ಲದೆ ರಂಜಾನ್ ತಿಂಗಳು ಕರುಣೆ, ಸಹನೆ ಹಾಗೂ ಸಮೃದ್ಧಿಯ ಸಂದೇಶವನ್ನು ನೀಡುವ ಪವಿತ್ರ ತಿಂಗಳಾಗಿದೆ ಎಂದು ಹೇಳಿದರು.
ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಮಾಜದ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ ಪರಸ್ಪರ ಪ್ರೀತಿ ಮತ್ತು ಸಾಮರಸ್ಯದ ಸೇತುವೆ ನಿರ್ಮಿಸಲು ಸಹಕಾರಿಯಾಗಲಿ ಎಂದು ಅವರು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ಸರ್ವಧರ್ಮದ ಸಹೋದರಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಲ್ಲಾಹನ ಕೃಪೆಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

