ರಾಯಚೂರು ಮಾರ್ಚ್ 04 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕಕ್ಕೆ ಸಂಯೋಜನೆಗೊಳಪಟ್ಟಿರುವ ಕಾಲೇಜುಗಳ ಸಂಘ, ಭಾರತ ಸರ್ಕಾರದ ಗೃಹ ಮಂತ್ರಾಲಯ ಅಧೀನದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದಿಶಾಬೋಧ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇವರ ಸಹಯೋಗದಲ್ಲಿ ನಶಾಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್, ಸ್ವಾಸ್ಥö್ಯ ಭಾರತ ಶ್ರೇಷ್ಠ ಭಾರತ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಆತ್ಮಹತ್ಯೆ ಮುಕ್ತ ಕ್ಯಾಂಪಸ್ ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮವನ್ನು ಮಾರ್ಚ್ 6ರಂದು ಹಮ್ಮಿಕೊಳ್ಳಲಾಗಿದೆ ಎಂದು ರಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ರಮೇಶ ಬಿ.ಹೆಚ್ ಅವರು ಹೇಳಿದರು.
ಮಾರ್ಚ್ 04ರ ಬುಧವಾರ ನಗರದ ರಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಅಂದು ಬೆಳಗ್ಗೆ 7.30ಕ್ಕೆ ಎಸ್‌ಪಿ ಫರೇಡ್ ಮೈದಾನದಿಂದ ಜಾಥಾ ವಾಕಥಾನ್ ಆರಂಭವಾಗಿ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಿ ನಗರದ ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಸೇರುವುದು. ಈ ಬೃಹತ್ ವಾಕಥಾನಕ್ಕೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಸ್ಥೆಗಳು ಸಹಕಾರ ನೀಡಿದ್ದು ಬೃಹತ್ ವಾಕ್‌ಥಾನದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅಂದಾಜು 5000 ಜನರು ಸೇರಲಿದ್ದಾರೆ. ಯುವ ಜನತೆಯನ್ನು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ರಕ್ಷಿಸಿ, ಜವಾಬ್ದಾರಿಯುತ ಮತ್ತು ಮೌಲ್ಯಾಧಾರಿತ ಕ್ಯಾಂಪಸ್‌ಗಳನ್ನು ನಿರ್ಮಿಸಲು ಮಾರ್ಚ್ 6ರಂದು ನಡೆಯುವ ಈ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದಿಶಾಬೋಧ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇವರುಗಳ ಸಂಯುಕ್ತ ಮುಂದಾಳತ್ವದಲ್ಲಿ ನಶಾ ಮುಕ್ತ ಭಾರತ್ – ಯುವ ಶುದ್ಧಿ ಅಭಿಯಾನ ಎಂಬ ರಾಷ್ಟ್ರವ್ಯಾಪಿ ಮಹತ್ವಾಕಾಂಕ್ಷಿ ಚಳವಳಿ ಆರಂಭಿಸಲಾಗಿದೆ. ಈ ಚಳವಳಿಯ ಉದ್ದೇಶ ಯುವಜನತೆಯನ್ನು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ರಕ್ಷಿಸಿ, ಜವಾಬ್ದಾರಿಯುತ ಮತ್ತು ಮೌಲ್ಯಾಧಾರಿತ ಕ್ಯಾಂಪಸ್‌ಗಳನ್ನು ನಿರ್ಮಿಸುವುದಾಗಿದೆ. ಈ ಉಪಕ್ರಮಕ್ಕೆ 10 ಕೇಂದ್ರ ಸಚಿವಾಲಯಗಳು ಹಾಗೂ ರಾಜ್ಯ ಕಾನೂನು ಜಾರಿಗೊಳಿಸುವ ಸಂಸ್ಥೆಗಳ ಸಹಕಾರವೂ ಇದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅವರ ಮಾರ್ಗದರ್ಶನದಲ್ಲಿ ಈ ಚಳವಳಿ ಮುನ್ನಡೆಯುತ್ತಿದೆ. ಅವರ ದೃಷ್ಟಿಕೋನವು ವಿದ್ಯಾಭ್ಯಾಸದೊಂದಿಗೆ ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ದೃಢತೆಯುಳ್ಳ ಕ್ಯಾಂಪಸ್‌ಗಳನ್ನು ನಿರ್ಮಿಸುವುದಾಗಿದೆ ಎಂದರು.
ನಶಾ ಮುಕ್ತ ಭಾರತ್ – ಯುವ ಶುದ್ಧಿ ಅಭಿಯಾನ ಒಂದು ಸಂಯೋಜಿತ ರಾಷ್ಟ್ರೀಯ ಯುವ ಜಾಗೃತಿ ಕಾರ್ಯಕ್ರಮವಾಗಿದ್ದು, ಭಾರತದಲ್ಲಿನ ಅತಿ ದೊಡ್ಡ ಮಾದಕ ವಸ್ತು ವಿರೋಧಿ ಚಳವಳಿಗಳಲ್ಲಿ ಒಂದಾಗಿದೆ. ಇದರಲ್ಲಿ 3 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ಭಾಗಿಯಾಗಿದ್ದಾರೆ ಎಂದರು.
ಯುವಜನರಲ್ಲಿ ಮಾದಕ ವಸ್ತು ಬಳಕೆಯ ವಿರುದ್ಧ ಜಾಗೃತಿ ಹಾಗೂ ಪ್ರತಿರೋಧ ಸೃಷ್ಟಿಸುವುದು. ಜವಾಬ್ದಾರಿಯುತ ಮತ್ತು ರಾಷ್ಟ್ರಜಾಗೃತ ನಾಗರಿಕರನ್ನು ಬೆಳೆಸುವುದು. ಒತ್ತಡ, ಸ್ನೇಹಿತರ ಪ್ರಭಾವ ಮತ್ತು ಸಾಮಾಜಿಕ ಪರಿಣಾಮಗಳಂತಹ ಆಧುನಿಕ ಸವಾಲುಗಳನ್ನು ಎದುರಿಸಲು ಮಾರ್ಗದರ್ಶನ, ಮಾದಕ ವಸ್ತು ವಿತರಣೆಯ ಮೂಲಕ ಯುವಜನರನ್ನು ಗುರಿಯಾಗಿಸುವ ಸಂಘಟಿತ ಜಾಲಗಳ ಬಗ್ಗೆ ಜಾಗೃತಿ, ಮಹಿಳಾ ವಿದ್ಯಾರ್ಥಿನಿಯರಿಗೆ ಸುರಕ್ಷಿತ ಮತ್ತು ಬೆಂಬಲದಾಯಕ ಕ್ಯಾಂಪಸ್ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಈ ವೇಳೆ ರಿಮ್ಸ್ನ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಶ್ರಿತ್ ಅವರು ಮಾತನಾಡಿ, ಅಂಗದಾನ ಕ್ಯಾಂಪಸ್ ಎಂಬ ಪರಿಕಲ್ಪನೆಯನ್ನು ಉತ್ತೇಜಿಸಿ, ಮಾನವೀಯ ಜವಾಬ್ದಾರಿಯಂತೆ ಅಂಗದಾನ ಜಾಗೃತಿಗೆ ಯುವಜನರನ್ನು ಪ್ರೇರೇಪಿಸಲಾಗುತ್ತಿದೆ. ಶ್ರೀ ಶಿವನಾಗಿ ರೆಡ್ಡಿ ಅವರ ನೇತೃತ್ವದಲ್ಲಿ ದಿಶಾಬೋಧ್ ಫೌಂಡೇಶನ್ ಕಳೆದ ಎರಡು ವರ್ಷಗಳಿಂದ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಅಭಿಯಾನದ ವಿಸ್ತರಣೆಯ ಭಾಗವಾಗಿ, ರಾಯಚೂರು ನಗರದಲ್ಲಿ ಮುಂದಿನ ಪ್ರಮುಖ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸಮುದಾಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮಾದಕ ವಸ್ತು ರಹಿತ, ಜವಾಬ್ದಾರಿಯುತ ಮತ್ತು ರಾಷ್ಟ್ರಭಕ್ತ ಯುವ ಚಳವಳಿಯನ್ನು ಬಲಪಡಿಸಲಾಗುತ್ತದೆ. ಅಲ್ಲದೆ ಕಾರ್ಯಕ್ರಮದ ಮೂಲಕ ಮಾದಕ ವಸ್ತು ರಹಿತ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ಕ್ಯಾಂಪಸ್ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನವೋದಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಾನಂದ, ಹೃದ್ರೋಗ ತಜ್ಞರು ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಭಾರಿ ವಿಶೇಷಾಧಿಕಾರಿ ಡಾ. ಮುರಳಿ ರಾವ್, ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ರೆಡ್ಡಿ, ನವೋದಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಕಟ್ಟಿ, ಶಿವಂ ನರ್ಸಿಂಗ್ ಕಾಲೇಜಿನ ಅಡಳಿತಾಧಿಕಾರಿ ರವಿ ಪಾಟೀಲ್, ನಂದಿನಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಸುಮಲತಾ, ಸ್‌ಎಎಮ್‌ಇಎಸ್ ದಂತ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಸೇರಿದಂತೆ ಇತರರು ಇದ್ದರು.

