ಬಳಗಾನೂರು: ಪಟ್ಟಣದ ಪ್ರತಿಷ್ಠಿತ ಶ್ರೀಬಸವೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 2005–2006ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಗುರುವಂದನಾ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಸ್ಕಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಪುರಾಣರಚನಾಕಾರ ಹಾಗೂ ಖ್ಯಾತ ಸಾಹಿತಿಗಳಾದ ಡಾ| ಶರಭಯ್ಯಸ್ವಾಮಿ ಕಂಬಾಳಿಮಠ ಅವರು ಮಾತನಾಡಿ, ಗುರು ಶಿಷ್ಯನ ಬದುಕಿಗೆ ನೀಡುವ ಜ್ಞಾನವೆಂಬ ದೀಪವು ಜೀವಮಾನಪೂರ್ತಿ ದಾರಿದೀಪವಾಗಿರುತ್ತದೆ. ಅಜ್ಞಾನವನ್ನು ದೂರ ಮಾಡಿ ಮಾನವೀಯ ಮೌಲ್ಯಗಳನ್ನು ಬೋಧಿಸುವ ಗುರುಗಳು ಮಾತೃಸಮಾನರು ಎಂದು ಹೇಳಿದರು.
ಅವರು ಮುಂದುವರೆದು, ಶಿಕ್ಷಣದ ಮಹತ್ವವನ್ನು ಅಂದಿನ ಕಾಲದಲ್ಲೇ ಅರಿತು ದೂರದೃಷ್ಟಿಯೊಂದಿಗೆ 1949ರಲ್ಲಿ ಮಾಜಿ ಸಂಸದರಾದ ಲಿಂ| ಶ್ರೀಸಿದ್ಧರಾಮೇಶ್ವರಸ್ವಾಮಿಗಳು ಶ್ರೀಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಮೂಲಕ ಈ ಶಾಲೆಯನ್ನು ಸ್ಥಾಪಿಸಿದರು. ಇಂದು 77 ವರ್ಷಗಳನ್ನು ಪೂರೈಸಿ ಅಮೃತ ಸಂಭ್ರಮದತ್ತ ಸಾಗುತ್ತಿರುವ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕು ನೀಡಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಶ್ರೀಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸಿದ್ದನಗೌಡ ಮಾಲಿಪಾಟೀಲ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಶ್ರೀಬಸವೇಶ್ವರ, ಲಿಂ| ಶ್ರೀಸಿದ್ಧರಾಮೇಶ್ವರಸ್ವಾಮಿ ಹಾಗೂ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಗೌರವಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೇದಾರನಾಥಸ್ವಾಮಿ, ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಅಮರನಾಥ ಹಳ್ಳೂರು ಅವರು ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಮುಖ್ಯಗುರು ವೀರಣ್ಣ ಹಂಪರಗುಂಡಿ, ನಿವೃತ್ತ ಶಿಕ್ಷಕರಾದ ಮೋತಿಲಾಲ್ ಜೈನ್, ಮಹಾಂತೇಶ ಸಾಲಿಮಠ, ಸಂಸ್ಥೆಯ ನಿರ್ದೇಶಕರಾದ ಪಂಪನಗೌಡ ಮಾಲಿಪಾಟೀಲ್, ಮೌನೇಶ್‌ಗೌಡ ಗದ್ದಿಗೌಡ್ರು, ಗೋವಿಂದರೆಡ್ಡಿಗೌಡ ಗದ್ದಿಗೌಡ್ರು, ಶೇಖರಗೌಡ ನಾಯಕ್, ಶಾಸನಗೌಡ ದಿನಸಮುದ್ರ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.
ಮೌನಾಚರಣೆ: ಶಾಲೆಯಲ್ಲಿ ಸೇವೆ ಸಲ್ಲಿಸಿ ಅಗಲಿದ ಮುಖ್ಯಗುರುಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೆರವಣಿಗೆ: ಪಟ್ಟಣದ ಶ್ರೀಮಾರುತಿ ದೇವಸ್ಥಾನದಿಂದ ನಿವೃತ್ತ ಹಾಗೂ ಸೇವೆಯಲ್ಲಿರುವ ಶಿಕ್ಷಕರನ್ನು ಸನ್ಮಾನಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಯಿತು. ಈ ಮೆರವಣಿಗೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು.
ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ವೇದಿಕೆಯಲ್ಲಿ ನಿವೃತ್ತ ಶಿಕ್ಷಕರು, ಸೇವೆಯಲ್ಲಿರುವ ಶಿಕ್ಷಕರು, ಪತ್ರಕರ್ತರು ಹಾಗೂ ಪೊಲೀಸ್ ಅಧಿಕಾರಿಗಳನ್ನು ವಿದ್ಯಾರ್ಥಿಗಳು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಬಳಿಕ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಗಳು ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.




