ಮಸ್ಕಿ : ಕೇಂದ್ರ ಸರಕಾರದ ಭೇಟಿ ಬಚಾವೋ ,ಭೇಟಿ ಪಡಾವೋ ಯೋಜನೆಗೆ ಇಡೀ ಸಮಾಜವನ್ನೇ ಮುನ್ನಡೆಸುವ ಶಕ್ತಿಯಿದೆ ಎಂದು ಮಸ್ಕಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಸ್ಕಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧುವಾರ ನಡೆದ ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ ಹಿರೇಮಠ. ಮಾತನಾಡಿ, ಗಂಡು, ಹೆಣ್ಣಿನ ಅನುಪಾತ ಅವಲೋಕಿಸಿಯಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಹೆಣ್ಣಿಗೆ ಹೆಣ್ಣೆ ಶತ್ರು ಆಗಬಾರದು. ತನಗೆ ಗಂಡು ಮಗುವೇ ಬೇಕು ಎನ್ನುವ ಆಸೆ ಬಿಡಬೇಕು. ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಇದಕ್ಕಾಗಿ ಹೆಣ್ಣು ಮಗುವಿಗೆ ಉನ್ನತ ಶಿಕ್ಷ ಣ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುರೇಶ್ ಹರಸೂರು, ಮುಖ್ಯಗುರು ಮೋಹನ್ ಬಾವಿಮನಿ, ಜಿ ವೆಂಕಟೇಶ್,ಅಮರೇಶ ಪತ್ತಾರ,ಡಾ. ಅಮರೇಶ, ಶಶಿರೇಖಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

