ಬಳಗಾನೂರು ಜ,21:- ಬಳಗಾನೂರು ಪಟ್ಟಣದ ಜನರಿಗೆ ಕೊನೆಗೂ ನಿರಾಳತೆಯ ಉಸಿರು ಬಿಡುವ ಅವಕಾಶ ದೊರೆತಿದೆ.
ಕೆಲವು ತಿಂಗಳುಗಳಿಂದ ಪಟ್ಟಣದಲ್ಲಿ ಜನರ ಮೇಲೆ ಹಾರಿ, ನಿಲ್ಲಿಸಿದ್ದ ವಾಹನಗಳನ್ನು ಬೀಳಿಸಿ, ಮನೆಗಳೊಳಗೆ ನುಗ್ಗಿ ಮೊಬೈಲ್ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಜನಪೀಡಕ ಕೋತಿಯನ್ನು ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯ್ತಿ ಸಿಬ್ಬಂದಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಅರಣ್ಯ ಇಲಾಖೆ ಮತ್ತು ಬಳಗಾನೂರು ಪಟ್ಟಣ ಪಂಚಾಯ್ತಿಯ ಸಿಬ್ಬಂದಿ ಸುಮಾರು ಎರಡು ತಾಸುಗಳ ಸತತ ಪ್ರಯತ್ನದ ನಂತರ ಈ ಕಿಲಾಡಿ ಕೋತಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಈ ಘಟನೆ ಕುರಿತು ನಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಅದಕ್ಕೆ ತಕ್ಷಣ ಸ್ಪಂದಿಸಿದ ಪಟ್ಟಣ ಪಂಚಾಯ್ತಿ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅದರ ಫಲವಾಗಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಜನಪೀಡಕ ಕೋತಿ ಸೆರೆಯಾಗುತ್ತಿದ್ದಂತೆ, ಪಟ್ಟಣದಾದ್ಯಂತ ಭಯಭೀತರಾಗಿದ್ದ ಜನರ ಮನದಲ್ಲಿ ಸಮಾಧಾನ ಮೂಡಿದೆ.
ಪಟ್ಟಣ ಪಂಚಾಯ್ತಿ ಹಾಗೂ ಅರಣ್ಯ ಇಲಾಖೆಯ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದು ಜನರ ಸುರಕ್ಷತೆಗೆ ಸರ್ಕಾರದ ಇಲಾಖೆಗಳು ಸ್ಪಂದಿಸಿದ ಉತ್ತಮ ಉದಾಹರಣೆಯಾಗಿದೆ.
ವರದಿ – ಸುರೇಶ ಬಳಗಾನೂರು


