21 ಅರಕೇರಾ 1: ದೇವದುರ್ಗ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಅರಕೇರಾ ಪಟ್ಟಣದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಮರ ಕತ್ತರಿಸುವ ಕಾರ್ಖಾನೆಗಳ (ಸಾ-ಮಿಲ್) ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸಾ-ಮಿಲ್‌ಗಳಲ್ಲಿದ್ದ ಚಕ್ರ ಹಾಗೂ ವಿದ್ಯುತ್ ಮೋಟಾರ್‌ಗಳನ್ನು ಜಪ್ತಿ ಮಾಡಿ, ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಲಯ ಅರಣ್ಯಾಧಿಕಾರಿ ಮುಹಮ್ಮದ್ ಅಲಿ ಉದ್ದೀನ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ಹಿಂದೆ 2024ರಲ್ಲಿ ಇದೇ ಸಾ-ಮಿಲ್‌ಗಳ ಮೇಲೆ ಅರಣ್ಯ ಇಲಾಖೆಯ ತಂಡ ದಾಳಿ ನಡೆಸಿ, ಅವುಗಳಿಗೆ ಬೀಗ ಹಾಕಿ ಮುಚ್ಚಿಸಿ ಮೊಕದ್ದಮೆ ದಾಖಲಿಸಿತ್ತು. ಆದರೆ, ಮಾಲೀಕರು ಅರಣ್ಯ ಇಲಾಖೆಯ ಸೀಲ್ ಹಾಗೂ ಬೀಗ ಮುರಿದು ಕಾನೂನು ಬಾಹಿರವಾಗಿ ಪುನಃ ಮರ ಕತ್ತರಿಸುವ ಕಾರ್ಯ ಆರಂಭಿಸಿದ್ದರು.
ಇಲಾಖೆಯ ಆದೇಶ ಉಲ್ಲಂಘಿಸಿ ಸಾ-ಮಿಲ್ ನಡೆಸುತ್ತಿದ್ದ 7 ಜನರ ವಿರುದ್ಧ ಇದೀಗ ಹೊಸದಾಗಿ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಮುಂದೆ ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದರೆ, ಕೇವಲ ಯಂತ್ರಗಳನ್ನು ಜಪ್ತಿ ಮಾಡುವುದಲ್ಲದೆ, ಜೆಸಿಬಿ ಸಹಾಯದಿಂದ ಫೌಂಡೇಶನ್ ಸಮೇತ ಸಾ-ಮಿಲ್‌ಗಳನ್ನು ಕಿತ್ತುಹಾಕಿ ನೆಲಸಮಗೊಳಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹನುಮೇಶ ಯಾದವ್, ಹನುಮಂತ ಪವಾಡಪ್ಪ ಗಸ್ತು ಅರಣ್ಯ ಪಾಲಕರಾದ ಸಗರಪ್ಪ, ಶರಣಬಸವರಾಜ್, ಬಸವರಾಜ್, ಭರಮಗೌಡ, ಈರೇಶ್, ಸಂಗಮ ಮತ್ತಿತರು ಇದ್ದರು.

