ಸಿಂಧನೂರು ನಗರ ಮತ್ತು ತಾಲೂಕು ಒಂದು ವಿಚಿತ್ರ ಸ್ಥಿತಿಯಲ್ಲಿ ನಿಂತಿದೆ. ಒಂದೆಡೆ, ಇಲ್ಲಿನ ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಸಿಂಧನೂರನ್ನು ಜಿಲ್ಲಾ ಮಾಡಬೇಕೆಂದು ಸಭೆ, ಪುಸ್ತಕ, ವಿಡಿಯೋಗಳ ಮೂಲಕ ಜನ ಬೆಂಬಲ ಕೋರಿದ್ದಾರೆ. ಸಿಂಧನೂರು ಜಿಲ್ಲಾ ಆಗುವುದಕ್ಕೆ ನಮ್ಮ ತಕರಾರು ಇಲ್ಲ. ಜಿಲ್ಲಾ ಆಗಲಿ ಅದು ಜನರ ಹಕ್ಕು, ಆದರೆ ಪ್ರಶ್ನೆ ಇದು ಜಿಲ್ಲಾ ಘೋಷಣೆಯಿಂದ ಜನರ ಹೊಟ್ಟೆ ತುಂಬುತ್ತದೆಯಾ? ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ಸಾವಿರಾರು ಶ್ರಮಿಕರಿಗೆ ಹಕ್ಕುಪತ್ರ ಸಿಗುತ್ತದೆಯಾ? ಬೆಳೆಗೆ ನೀರಿಲ್ಲದೆ ಗುಳೆ ಹೋಗುವ ರೈತರ ಬದುಕು ಬದಲಾಗುತ್ತದೆಯಾ? ಈ ವಿಷಯಗಳು ಚರ್ಚೆಯಾಗುತ್ತಿಲ್ಲ. ಶಾಸಕದ್ವಯರು ಉತ್ತರ ಕೊಡಬೇಕು ಎಂದು ಸಂಘ ಮನವಿ ಪತ್ರ ಸಲ್ಲಿಸಿದೆ.
ಸಿಂಧನೂರಿನಲ್ಲಿ ಇಂದು ಬೀದಿಗೆ ಬಿದ್ದ ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಕೂಲಿ ಕಾರ್ಮಿಕರು, ಹಮಾಲಿ ಮಾಡುವ ಶ್ರಮಿಕರು, ಕಸ ಮುಸುರೆ, ಬಟ್ಟೆ ತೊಳೆಯುವ ಗೃಹ ಕಾರ್ಮಿಕರು ಸೇರಿದಂತೆ ಸಾವಿರಾರು ಕುಟುಂಬಗಳು ಬಾಡಿಗೆ ಮನೆಗಳಲ್ಲಿ, ಅಸ್ಥಿರ ಬದುಕಿನಲ್ಲಿ, ಯಾವುದೇ ಹಕ್ಕು ಪತ್ರವಿಲ್ಲದೆ ಬದುಕುತ್ತಿದ್ದಾರೆ. ಇವರ ಬದುಕಿನ ಪ್ರಶ್ನೆಗೆ ಯಾವ ಶಾಸಕರ ಸಭೆಯಲ್ಲೂ ಚರ್ಚೆಗೆ ಬರಲೇ ಇಲ್ಲಾ ಬಂದರೂ ಉತ್ತರ ಇಲ್ಲ. ತಾಲೂಕಿನಾದ್ಯಂತ ಸರ್ಕಾರಿ ಭೂಮಿ ದಲ್ಲಾಳಿಗಳ ನೆಲಗಳ್ಳರ ಪಾಲಾಗುತ್ತಿದೆ.
ದಲಿತ, ಅಲ್ಪಸಂಖ್ಯಾತ, ಹಿಂದುಳಿದ, ಭೂಹೀನ ಬಡವರಿಗೆ ಭೂಮಿ, ನಿವೇಶನ ಸಿಗುತ್ತಿಲ್ಲ. ಡಿಗ್ರಿ ಮೇಲೆ ಡಬಲ್ ಡಿಗ್ರಿ ಮಾಡಿದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗವಿಲ್ಲ. ನಿವೇಶನ ರಹಿತರಿಗೆ ಅಕ್ರಮ ಎಂಬ ಮುದ್ರೆ ಅಂಟಿಸಲಾಗುತ್ತಿದೆ. ಇನ್ನೊಂದೆಡೆ, ಟಿಬಿಡ್ಯಾಮ್ ಗೇಟ್ ಕೂಡಿಸುವ ಹೆಸರಿನಲ್ಲಿ ತುಂಗಭದ್ರಾ ಕಾಲುವೆಗೆ 2ನೇ ಬೆಳೆಗೆ ನೀರು ಇಲ್ಲ, ತುತ್ತು ಅನ್ನಕ್ಕಾಗಿ ಗುಳೆ ಹೋಗುವ ಪರಿಸ್ಥಿತಿಗೆ ತಾಲೂಕಿನ ಜನರನ್ನ ತಳ್ಳಲ್ಪಟ್ಟಿದ್ದಾರೆ. ಶಾಸಕರೇ ಅಭಿವೃದ್ಧಿ ಘೋಷಣೆಗಳು ಬೇಡ ಸ್ವಾಮಿ, ನಮಗೆ ನೆಲದ ಮೇಲೆ ಕೆಲಸ ಬೇಕು. ಜಿಲ್ಲಾ ಘೋಷಣೆಗೂ ಮೊದಲು ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಷ್ಟ ಕಾರ್ಯಯೋಜನೆ ಪ್ರಕಟಿಸಿ.
ಇದು ಜಿಲ್ಲಾ ಪ್ರಶ್ನೆಯಲ್ಲ ಇದು ಬದುಕಿನ ಪ್ರಶ್ನೆ, ಇದು ಹೊಟ್ಟೆಯ ಪ್ರಶ್ನೆ, ಇದು ಹಕ್ಕಿನ ಪ್ರಶ್ನೆ, ಇದಕ್ಕೆ ಮಾನ್ಯ ಹಂಪನಗೌಡರು ಮತ್ತು ಮಾನ್ಯ ಬಸನಗೌಡರು ಇಬ್ಬರು ಶಾಸಕದ್ವಯರು ಉತ್ತರ ಕೊಡಬೇಕು, ಜನರಿಗೆ ಈಗ ಬೇಕಾಗಿರುವುದು ಹಕ್ಕುಪತ್ರ, ಭೂಮಿ, ಮನೆ, ನೀರು, ಉದ್ಯೋಗ, ಸಂಘಟನೆಯ ಬೇಡಿಕೆಗಳ ಬಗ್ಗೆ ಸ್ಪಷ್ಟ ಕಾಲಮಿತಿಯೊಳಗಿನ ಲಿಖಿತ ಉತ್ತರ ಮತ್ತು ಕಾರ್ಯಯೋಜನೆ ನೀಡದೆ ಇದ್ದರೆ ಸಿಪಿಐ(ಎಂಎಲ್) ರೆಡ್ ಸ್ಪಾರ್ ಹಾಗೂ ಕರ್ನಾಟಕ ರೈತ ಸಂಘ ಸಿಂಧನೂರು ತಾಲೂಕು ಜಂಟಿ ಸಮಿತಿಗಳು ತಾಲೂಕಿನ
ಶ್ರಮಿಕ ಜನರನ್ನು ಸಂಘಟಿಸಿ ತೀವ್ರ ಹೋರಾಟದ ಹಾದಿಗೆ ಹಂತ ಹಂತವಾಗಿ ಇಳಿಯಬೇಕಾಗುತ್ತದೆ ಎಂಬುದನ್ನು ಎಚ್ಚರಿಕೆಯಿಂದ ತಿಳಿಸುತ್ತೇವೆ ಎನ್ನುವ ಮನವಿಯನ್ನು ತಹಶೀಲ್ದಾರ್ ಮತ್ತು ಪೌರಾಯುಕ್ತರಿಗೆ ಮಂಗಳವಾರ ಸಲ್ಲಿಸಲಾಯಿತು.
ಇದೇ ವೇಳೆ ಎಂ.ಗಂಗಾಧರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಹೆಚ್.ಆರ್.ಹೊಸಮನಿ, ಹನುಮಂತಪ್ಪ ಗೋಡಿಹಾಳ, ಹುಲುಗಪ್ಪ ಬಳ್ಳಾರಿ, ರಾಮು, ಧರಗಯ್ಯ, ಶಂಕ್ರಪ್ಪ, ಅಂಬಣ್ಣ, ಭಾರತಿ, ಹುಸೇನಬ್ಬಿ, ಹುಸೇನಮ್ಮ, ದ್ರಾಕ್ಷಯಣಮ್ಮ, ಮಹಿಮುದ ಬೇಗಮ್, ಮಹಾದೇವಮ್ಮ, ಯಮನೂರ, ಕೇಶವ, ಶಿವು, ಯಲ್ಲಪ್ಪಗೌಡ, ಕಾಶೀನಾಥ, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

