ಮುದ್ದೇಬಿಹಾಳ :-ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನಮ್ಮಿಂದಾಗುವ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಮಾಡುವ ಸಂಕಲ್ಪದೊಂದಿಗೆ, ತಂದೆಯವರ ಕನಸನ್ನು ಸಾಕಾರಗೊಳಿಸಲು ‘ದಿ ಆರ್ಕ್ ಎಂಜಲ್ ಆಂಗ್ಲ ಮಾಧ್ಯಮ ಶಾಲೆ’ಯನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಎ.ಎಂ. ಮುಲ್ಲಾ ಹೇಳಿದರು.
ಪಟ್ಟಣದ ಹೊರವಲಯದ ಕವಡಿಮಟ್ಟಿ ಗ್ರಾಮದಲ್ಲಿರುವ ಆರ್ಕ್ ಎಂಜಲ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 11ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯು ಪ್ರಾಮಾಣಿಕತೆಯಿಂದ ಸಲ್ಲಿಸುತ್ತಿರುವ ಸೇವೆಯ ಫಲವಾಗಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವ ಕಾರಣ ಇಂದು ಸಂಸ್ಥೆ ನಿರಂತರ ಪ್ರಗತಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆ ತಾಲೂಕು ಮಟ್ಟದಲ್ಲಿ ಉತ್ತಮ ಹೆಸರು ಗಳಿಸಬೇಕೆಂದು ಸಿಬ್ಬಂದಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿ, ಈ ಸಂಸ್ಥೆಯ ವಿದ್ಯಾರ್ಥಿಗಳ ಬುದ್ಧಿವಂತಿಕೆ ಹಾಗೂ ವಸ್ತು ಪ್ರದರ್ಶನಗಳು ಅತ್ಯುತ್ತಮವಾಗಿವೆ. ಶಿಕ್ಷಕರ ಕಾರ್ಯ ವೈಖರಿ ಶ್ಲಾಘನೀಯವಾಗಿದೆ. ಶಿಕ್ಷಣದ ಅಭಿವೃದ್ಧಿಯಿಂದಲೇ ದೇಶದ ಪ್ರಗತಿ ಸಾಧ್ಯ. ಇಲ್ಲಿ ದೊರೆಯುತ್ತಿರುವ ಉತ್ತಮ ಶಿಕ್ಷಣದ ಸದುಪಯೋಗ ಪಡೆದು ಮಕ್ಕಳು ಜೀವನದಲ್ಲಿ ಸಾಧನೆ ಮಾಡಬೇಕು. ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನದಿಂದ ಶಾಲೆ ಇಂದು ಹೆಮ್ಮರವಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಸುಜಾತಾ ಬೋಸ್ಲೆ ಅವರು ಶಾಲೆಗೆ ₹30,000 ದೇಣಿಗೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪಿಂಟು ಸಾಲಿಮನಿ, ಪರಿದಾಬೇಗಂ ಭಾಗವಾನ್, ಅಲ್ಲಾಬಕ್ಷ ನಾಯ್ಕೋಡಿ, ದೈಹಿಕ ಶಿಕ್ಷಣಾಧಿಕಾರಿ ಎ.ಜಿ. ದಖನಿ, ಸಿಆರ್ಪಿ ಸರಸ್ವತಿ ವಡವಡಗಿ, ಬೀಬಿ ಆಯೀಶಾ ನಾಲತವಾಡ, ಆಯೀಶಾ ಅವಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಕ್ಕಳಿಂದ ಜರುಗಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರು ಹಾಗೂ ಸಾರ್ವಜನಿಕರನ್ನು ಮನರಂಜಿಸಿವೆ. ಶಿಕ್ಷಕಿ ಆಯೀಶಾ ಅವಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಸಿಬ್ಬಂದಿ, ನೂರಾರು ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

