ಅರಕೇರಾ : ಹಳೆಯ ವಿದ್ಯಾರ್ಥಿಗಳನ್ನು ಒಂದುಗೂಡಿಸಿ, ಅವರ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಲು ಒಂದು ಒಳ್ಳೆಯ ವೇದಿಕೆ ಸೃಷ್ಟಿಸಿದಂತಾಗಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಆಲ್ಕೋಡ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ ಹಾಗೂ ಗುರು ವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯ ಪಾಲಿಗೆ ಶಾಲೆ ದಿನಗಳು ಸುವರ್ಣ ದಿನಗಳು. ನಾನೂ ಸಹ ಇದರಿಂದ ಹೊರತಲ್ಲ.ಶಿಕ್ಷಣಕ್ಕೆ ಸಂಬಂಧಿಸಿದ ಅಂದಿನ ಸಮಸ್ಯೆಗಳೇ ಬೇರೆ, ಇಂದಿನ ಸಮಸ್ಯೆಗಳೇ ಬೇರೆ. ಹಿಂದೆ ಕಲಿಕೆಗೆ ಹೆಚ್ಚಿನ ಅವಕಾಶ ಇರಲಿಲ್ಲ. ಆದರೆ ಇಂದು ಹಾಗಿಲ್ಲ. ಎಲ್ಲ ಸ್ಥಳಗಳಲ್ಲೂ ಶಾಲೆ, ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಿವೆ ಎಂದು ಹೇಳಿದರು. ನಾವು ಓದಿದ ಶಾಲಾ – ಕಾಲೇಜಿನ ಜತೆಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಬೇಕು.ಒಳ್ಳೆಯ ಭಾವನೆಯಿಂದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ರಾಜಕುಮಾರ ಡೋಣಿ ಮಾತನಾಡಿ, ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವವಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಜ್ಞಾನವನ್ನು ಹೊರ ತರಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾನೆ. ಮಾನವ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರವಾಗಬೇಕಾಗುತ್ತದೆ. ಇಂತಹ ಗುರುಗಳನ್ನು ನೆನೆಯುವಂತಹ ಕಾರ್ಯ ನಡೆಯುತ್ತಿರುವುದು ಖುಷಿಯ ಸಂಗತಿ ಎಂದರು.
ಈ ವೇಳೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರಾದ ಭೀಮರಾವ ಪಾಟೀಲ್, ಶಿಕ್ಷಕರಾದ ಶಶಿಧರ್, ಕನಕಪ್ಪ, ವೀಣಾ, ಸೈನಾ ಬೇಗಂ ಸೇರಿದಂತೆ ಹಳೆಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಸಾಬಣ್ಣ ಆಲ್ಕೋಡ, ಅಧ್ಯಕ್ಷ ನಾಗರಾಜ ಚಿಂಚರಕಿ, ಉಪಾಧ್ಯಕ್ಷರಾದ ಶಾಂತಮ್ಮ ಹಾಗೂ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

