ಕಾರಟಗಿ : ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಉಳಿದ ಅವಧಿಗಾಗಿ ನೂತನ ಅಧ್ಯಕ್ಷರಾಗಿ ಮಂಜುನಾಥ ಮೇಗೂರು, ಉಪಾಧ್ಯಕ್ಷರಾಗಿ ಸುಜಾತ ನಾಗರಾಜ ಶುಕ್ರವಾರ ಆಯ್ಕೆಯಾದರು. ಕಾರಟಗಿ ತಹಶೀಲ್ದಾರ್ ಎಂ. ಕುಮಾರಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಿರೀಕ್ಷೆಯಂತೆಯೇ ಆಯ್ಕೆ ನಡೆಯಲಾಗಿದೆ. ಹಿಂದುಳಿದ ವರ್ಗ ಆ ಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮಂಜುನಾಥ ಮೇಗೂರು ಮತ್ತು ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತ ನಾಗರಾಜ ಮತ್ತು ಬಿಜೆಪಿ ಯಿಂದ ಅಧ್ಯಕ್ಷ ಸ್ಥಾನಕ್ಕೆ ಮೌನಿಕಾ ಧನಂಜಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ ದೊಡ್ಡಮನಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲಿಸಿದ ಚುನಾವಣಾ ಅಧಿಕಾರಿ ಅಂತಿಮವಾಗಿ ಚುನಾವಣೆ ನಡೆಸಿದರು. ಒಟ್ಟು 23 ಜನ ಸದಸ್ಯರು ಹಾಗೂ ಶಾಸಕರು, ಸಂಸದರು ಸೇರಿ 25 ಜನರಿದ್ದರು. ಆದರೆ ಈ ಪೈಕಿ ಬಿಜೆಪಿಯ ಮೂರು ಜನ ಸದಸ್ಯರು ಕಾಂಗ್ರೆಸ್ ನಲ್ಲಿ ಗುರುತಿಸಿ ಕೊಂಡಿದ್ದರಿಂದ ಗೈರಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗಳು ತಲಾ 13 ಮತ ಪಡೆದು ಜಯ ಗಳಿಸಿದರೆ. ಬಿಜೆಪಿ ಇಬ್ಬರು ಅಭ್ಯರ್ಥಿಗಳು ತಲಾ 9 ಮತ ಪಡೆದು ಪರಾಭವಗೊಂಡರು. ಈ ಸಂದರ್ಭದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ್ ಹಿಟ್ನಾಳ್ ಅವರು ಹೂಮಾಲೆ ಹಾಕಿ ಶುಭಾಶಯ ಕೋರಿದರು. ಬಳಿಕ ಪುರಸಭೆ ಬಳಿ ನೆರೆದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

