ಮಾನ್ವಿ : ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಪಟ್ಟಣದ ಮದ್ಲಾಪುರು ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ಯೋಗ ಶಿಬಿರವನ್ನು ಆಯೋಜಿಸಲಾಯಿತು. ಈ ಶಿಬಿರವನ್ನು ಯೋಗ ಸನ್ನಿಧಿ ಜ್ಞಾನ ವಿದ್ಯಾ ಪೀಠ ಟ್ರಸ್ಟ್, ಮಾನ್ವಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಯೋಗ ಗುರು ಅನ್ನದಾನಯ್ಯ ಅವರು ಶಾಲಾ ಮಕ್ಕಳಿಗೆ ಯೋಗಾಭ್ಯಾಸವನ್ನು ತರಬೇತಿ ರೂಪದಲ್ಲಿ ತಿಳಿಸಿಕೊಟ್ಟರು.
ಶಿಬಿರದಲ್ಲಿ ತ್ರಿಕೋಣಾಸನ, ಪದ್ಮಾಸನ, ಗೋಮುಖಾಸನ, ಪಾದಾಹಸ್ತಾಸನ ಸೇರಿದಂತೆ ವಿವಿಧ ಯೋಗಾಸನಗಳು, ಪ್ರಾಣಾಯಾಮಗಳು ಹಾಗೂ ಮುದ್ರೆಗಳ ಅಭ್ಯಾಸವನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು. ನಂತರ ಧ್ಯಾನಾಭ್ಯಾಸ ನಡೆಸಿ ಶಿಬಿರವನ್ನು ಸಮರ್ಪಕವಾಗಿ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ರಾಯಚೂರಿನ ಡಯಟ್ ಶಿಕ್ಷಣಾಧಿಕಾರಿಗಳಾದ ಜೀವನ್ ಸಾಬ್ ಮಾತನಾಡಿ, ರಾಯಚೂರು ಜಿಲ್ಲೆಾದ್ಯಂತ ಸರಕಾರಿ ಶಾಲಾ ಮಕ್ಕಳಿಗಾಗಿ ನಿರಂತರವಾಗಿ ಯೋಗ ಶಿಬಿರಗಳನ್ನು ಆಯೋಜಿಸುತ್ತಿರುವ ಯೋಗ ಗುರು ಅನ್ನದಾನಯ್ಯ ಅವರ ಸೇವೆ ಶ್ಲಾಘನೀಯವಾಗಿದ್ದು, ಇಂತಹ ಯೋಗ ಶಿಬಿರಗಳು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಪ್ಪ ಮಾತನಾಡಿ, ನಿಯಮಿತ ಯೋಗಾಭ್ಯಾಸದಿಂದ ಮಕ್ಕಳ ನರನಾಡಿಗಳಲ್ಲಿ ರಕ್ತಸಂಚಾರ ಸುಧಾರಿಸಿ ದೇಹದ ಆರೋಗ್ಯ ಹೆಚ್ಚುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ದ್ಯಾವಪ್ಪ, ಶ್ರೀಕಾಂತ್, ಸಂದೀಪ್, ಮಾಜೀದ್ ಅಲಿ ಖಾನ್, ತಸ್ಲೀಮ್ ಸಲೋಮಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿ ಯೋಗ ಶಿಬಿರವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *