ಸಿಂಧನೂರು : ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಸಾಮಗ್ರಿಗಳ ಜಪ್ತಿಗೆ ಸಿಂಧನೂರು ಹಿರಿಯ ಶ್ರೇಣಿ ನ್ಯಾಯಾಲಯ ಆದೇಶ ನೀಡಿದ್ದು, ವಸತಿ ನಿಲಯಕ್ಕಾಗಿ ಖಾಸಗಿಯವರ ಕಟ್ಟಡ ಪಡೆದು ಬಾಡಿಗೆ ಪಾವತಿಸದೆ ವಿಳಂಬ ಮಾಡಿದ
ಹಿನ್ನೆಲೆಯಲ್ಲಿ ಸೋಮವಾರದಂದು ಕಚೇರಿಯ ಎಲ್ಲಾ ಸಾಮಗ್ರಿಗಳನ್ನು ಸಹ ಜಪ್ತಿ ಮಾಡಲಾಯಿತು.
ಪ್ರಕರಣದ ಹಿನ್ನೆಲೆ ಕಂಪ್ಯೂಟರ್, ಟೇಬಲ್, ಚೇರ್, ಹಾಗೂ ಇನ್ನತರೆ ಸಾಮಗ್ರಿಗಳನ್ನು ಕಚೇರಿಯಿಂದ ಹೊರ ಹಾಕಲಾಯಿತು. ನಗರದ ಖಾಜಾಸಾಬ್ ತಂದೆ ಶಂಶುರ್ ಸಾಬ್ ಎಂಬುವವರು ಮಹೆಬೂಬಿಯಾ ಕಾಲೋನಿಯಲ್ಲಿರುವ ತಮ್ಮ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕಾಗಿ ಬಾಡಿಗೆಗೆ ಕೊಟ್ಟಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆಯು ಸಕಾಲದಲ್ಲಿ ಬಾಡಿಗೆ ಪಾವತಿಸದೆ ವಿಳಂಬ ಧೋರಣೆ ಅನುಸರಿಸಿದ ಕಾರಣ 2025 ಡಿಸೆಂಬರ್ 24 ರಂದು ಕೋರ್ಟ್ ನಲ್ಲಿ (ಒ.ಎಸ್.ನಂ.228|2020) ದಾವೆ ಹೂಡಿದ್ದರು. ಕೋರ್ಟ್ 10,90,665, ರೂ.ಬಾಡಿಗೆ ಹಾಗೂ ಬಡ್ಡಿ 8,17,980, ರೂ.ಹಾಗೂ ಇತರೆ ಸೇರಿ ಒಟ್ಟು 20,03,772 ರೂ.ಕಟ್ಟಡ ಮಾಲೀಕರಿಗೆ ಪಾವತಿಸಲು ಸಮಾಜ ಕಲ್ಯಾಣ ಇಲಾಖೆಗೆ ಆದೇಶ ಮಾಡಿತ್ತು.
ಇಲಾಖೆಯ ಅಧಿಕಾರಿಗಳು ಕೋರ್ಟ್ ಆದೇಶದಂತೆ ನಿಗದಿತ ಅವಧಿಯಲ್ಲಿ ಹಣವನ್ನು ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ದಾವೆದಾರರ ಮನವಿಯನ್ನು ಮಾನ್ಯ ಮಾಡಿದ ಕೋರ್ಟ್ ಇಲಾಖೆ ಕಚೇರಿಯ ಸಾಮಗ್ರಿಗಳ ಜಪ್ತಿಗೆ ಆದೇಶ ಹೊರಡಿಸಿದೆ. ದಾವೆದಾರರಾದ ಖಾಜಾಸಾಬ್ ಅವರ ಪರ ವಕೀಲ ಎನ್.ರಾಮನಗೌಡ ವಾದಿಸಿದರು. ಈ ವೇಳೆ ಜಪ್ತಿಯಲ್ಲಿ ನ್ಯಾಯಾಲಯದ ಅಮೀನ್ ಬೂದಿ ಬಸವ, ಬಸವರಾಜ, ಮಹಾಂತೇಶ, ಸುಮಂಗಲಾ, ವಕೀಲ ಹುಸೇನ್ ಭಾಷಾ ಇದ್ದರು.

