ರಾಯಚೂರು ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಇಂದು ಮರಳು ತುಂಬಿದ ಟಿಪ್ಪರ್ ಹಾಗೂ ಟ್ರಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಹತ್ತಿ ಚೀಲಗಳನ್ನು ಹೇರಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಟ್ರಾಕ್ಟರ್ ಪಲ್ಟಿ: ರೈತ ದುರ್ಮರಣ

ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಟ್ರಾಕ್ಟರ್ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ವೇಳೆ ಟ್ರಾಕ್ಟರ್ ಮೇಲೆ ಕುಳಿತಿದ್ದ ರೈತ ನಾಗರಾಜ್ (50) ಅವರು ಟ್ರಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ರಾಕ್ಟರ್ ಚಾಲಕ ಬಸವರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹತ್ತಿ ಮಾರಲು ಹೋಗುತ್ತಿದ್ದಾಗ ನಡೆದ ದುರಂತ!

ಮೃತ ರೈತ ನಾಗರಾಜ್ ಮಾನ್ವಿ ತಾಲ್ಲೂಕಿನ ಗೋರ್ಕಲ್ ಗ್ರಾಮದವರಾಗಿದ್ದಾರೆ. ತಾವು ಬೆಳೆದ ಹತ್ತಿಯನ್ನು ಮಾರಾಟ ಮಾಡಲು ಟ್ರಾಕ್ಟರ್‌ನಲ್ಲಿ ಲೋಡ್ ಮಾಡಿಕೊಂಡು ರಾಯಚೂರಿನ ಮಿಲ್‌ಗೆ ತರುತ್ತಿದ್ದಾಗ ಈ ಘಟನೆ ನಡೆದಿದೆ. ಕಷ್ಟಪಟ್ಟು ಬೆಳೆದ ಬೆಳೆ ಕೈಸೇರುವ ಮುನ್ನವೇ ರೈತ ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳಕ್ಕೆ ಸಚಿವ ಬೋಸರಾಜು ಭೇಟಿ

ಅಪಘಾತ ನಡೆದ ಸಮಯದಲ್ಲಿ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸಚಿವ ಎನ್‌ಎಸ್ ಬೋಸರಾಜು ಅವರು ತಕ್ಷಣ ವಾಹನ ನಿಲ್ಲಿಸಿ ಸ್ಥಳಕ್ಕೆ ಭೇಟಿ ನೀಡಿದರು. ಮೃತ ರೈತನ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು, ಘಟನೆ ಕುರಿತು ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟಿಪ್ಪರ್ ಚಾಲಕ ಪರಾರಿ, ಕೇಸ್ ದಾಖಲು

ಅಪಘಾತ ಸಂಭವಿಸುತ್ತಿದ್ದಂತೆಯೇ ಟಿಪ್ಪರ್ ಚಾಲಕ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಟಿಪ್ಪರ್ ವಶಕ್ಕೆ ಪಡೆದು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *