ರಾಯಚೂರು ಜನವರಿ 07 (ಕ.ವಾ.): ಕರ್ನಾಟಕ ಲೋಕಾಯುಕ್ತದಲ್ಲಿ 2022ರಲ್ಲಿ ಇದ್ದ 8000 ಕೇಸಗಳ ಪ್ರಮಾಣವು ಈಗ 2025ರ ಹೊತ್ತಿಗೆ 45,000ಕ್ಕೆ ಏರಿದ್ದು ದುರದೃಷ್ಟಕರ ಎಂದು ಗೌರವಾನ್ವಿತ ಕರ್ನಾಟಕ ಲೋಕಾಯುಕ್ತರ ಕಾರ್ಯದರ್ಶಿಗಳಾದ ಶ್ರೀನಾಥ ಕೆ ಅವರು ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 7ರಂದು ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರಿಂದ ನಡೆದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಎ.ವಿ.ಪಾಟೀಲ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸರ್ಕಾರದ ಕೆಲಸ ದೇವರ ಕೆಲಸ ಎಂದು ಅರ್ಥೈಸಲಾಗಿದೆ. ಸರ್ಕಾರಿ ನೌಕರಿ ಪಡೆಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅದೃಷ್ಟವಂತರು. ಅವರ ಬಗ್ಗೆ ಸಮಾಜದಲ್ಲಿ ವಿಶೇಷ ಗೌರವ ಇರುತ್ತದೆ. ಆದರೆ, ಇದನ್ನು ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಅರಿಯದೇ ಹಣದ ಆಸೆಗಾಗಿ ಲೋಪ ಎಸಗುತ್ತಿರುವುದು ಕಂಡು ಬರುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಪವೆಸಗಿ ವಾರಂಟ್ ಸ್ವೀಕರಿಸುವ ಹಂತಕ್ಕೆ ತಲುಪಿದ್ದು ನೋವಿನ ಸಂಗತಿ ಎಂದು ಅವರು ತಿಳಿಸಿದರು.
ಕೆರೆಗಳ ಸುರಕ್ಷತೆಗೆ ಒತ್ತು: ಕೆರೆ ಒತ್ತುವರಿ ಹಿನ್ನೆಲೆಯಲ್ಲಿ 2018ರಲ್ಲೇ ಲೋಕಾಯುಕ್ತದಿಂದ ರಾಜ್ಯದ ಎಲ್ಲ ಕಡೆಗೆ ಕೇಸ್ ದಾಖಲಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 587 ಕೆರೆಗಳಿದ್ದು, ಜನರ ಜೀವನಾಡಿಯಾದ ಈ ಕೆರೆಗಳ ಸುರಕ್ಷತೆಗೆ ಒತ್ತು ಕೊಡಬೇಕು. ಜಿಲ್ಲೆಯಲ್ಲಿ 46 ಕೆರೆಗಳ ಒತ್ತುವರಿ ತಡೆದಿದ್ದೇವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. 319 ಕೆರೆಗಳ ಸರ್ವೆ ನಡೆಸಿದ ಬಗ್ಗೆ ನಕ್ಷೆ ನೀಡಬೇಕು ಎಂದು ಎಡಿಎಲ್‌ಆರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
155 ಘಟಕ ನಿಷ್ಕ್ರಿಯ; ಅಸಮಾಧಾನ: ಅರಕೇರಾದಲ್ಲಿ 72, ದೇವದುರ್ಗದಲ್ಲಿ 72, ಲಿಂಗಸಗೂರುದಲ್ಲಿ 114, ಮಸ್ಕಿಯಲ್ಲಿ 66, ರಾಯಚೂರುದಲ್ಲಿ 107, ಸಿಂಧನೂರನಲ್ಲಿ 116 ಮತ್ತು ಸಿರವಾರದಲ್ಲಿ 57 ಸೇರಿ ಜಿಲ್ಲೆಯಲ್ಲಿ ಒಟ್ಟು 716 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 561 ಘಟಕಗಳು ಮಾತ್ರ ಸುಸ್ಥಿತಿಯಲ್ಲಿವೆ. 155 ಘಟಕಗಳು ನಿಷ್ಕ್ರಿಯವಾಗಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ನಾಯಿಗಳ ಹಾವಳಿ ತಡೆಗೆ ಕ್ರಮವಹಿಸಿ: ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದಾಗ್ಯೂ ರಾಯಚೂರು ನಗರ ಸೇರಿದಂತೆ ಸಿಂಧನೂರ, ಮಾನವಿ, ಲಿಂಗಸೂರು, ದೇವದುರ್ಗ, ಮಸ್ಕಿ, ಸಿರವಾರ, ಅರಕೇರಾ ಯಾವುದೆ ಕಡೆಗಳಲ್ಲಿ ಏನೂ ಕ್ರಮಗಳಾಗದೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸುಮ್ಮನಿದ್ದು, ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ವಿವರವಾದ ವರದಿ ನೀಡವೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬಯಲುಶೌಚ ಮುಕ್ತ ಜಿಲ್ಲೆಯಾಗಲಿ: ಈಗಲು ರೋಡ್ ಪಕ್ಕ ಕುಳಿತು ಬಯಲು ಶೌಚ ಮಾಡುವ ಪರಿಸ್ಥಿತಿ ರಾಯಚೂರು ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಕಾಣುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಶೌಚಾಲಯ ಪರಿಸ್ಥಿತಿಯ ಚಿತ್ರಣ ಸಿಕ್ಕಿಲ್ಲ. ಸಿಇಓ ಅವರಿಂದ ಮಾಹಿತಿ ಪಡೆದು ಪರಿಶೀಲಿಸುತ್ತೇವೆ ಎಂದು ಅವರು ತಿಳಿಸಿದರು.
ಚೆಕ್‌ಪೋಸ್ಟಗಳ ಮೇಲೆ ನಿಗಾ: ಬೀದರ ಜಿಲ್ಲೆಯ ಹುಮನಾಬಾದ್ ಬಳಿಯ ಚೆಕ್‌ಪೋಸ್ಟ್ ಮೂಲಕ ಸಂಚರಿಸುವ ವಾಹನಗಳ ಚಾಲಕರಿಂದ ಕೆಲವು ಆರ್‌ಟಿಓ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಡಹಗಲೇ ಅನಧೀಕೃತವಾಗಿ ಹಣ ವಸೂಲಿ ಮಾಡುವ ಕೃತ್ಯವನ್ನು ನಮ್ಮ ಲೋಕಾ ತಂಡವು ಬೇಧಿಸಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿದೆ. ಈ ಜಾಲ ಎಲ್ಲಾ ಕಡೆ ಇರಬಹುದು ಎಂದು ಯೋಚಿಸಿ ರಾಯಚೂರು ಚೆಕ್ ಪೋಸ್ಟಗಳ ಮೇಲೆ ನಿಗಾ ಇಡಲಾಗುವುದು ಎಂದು ಶ್ರೀನಾಥ ಕೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಲೋಕಾಯುಕ್ತದ ಅಧೀಕ್ಷಕರಾದ ಸತೀಶ್ ಎಸ್ ಚಿಟಗುಬ್ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಕ್ಷ ಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಹಾಗೂ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *