ರಾಯಚೂರು ಜನವರಿ 07 (ಕ.ವಾ.): ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಕಡ್ಡಾಯವಾಗಿ ನಿರ್ವಹಣೆ ಆಗಲೇಬೇಕಾದ ನೌಕರರ ಹಾಜರಾತಿ ವಹಿ, ಚಲನವಹಿ, ನಗದು ವಹಿಗಳನ್ನು ಸರಿಯಾಗಿ ನಿರ್ವಹಿಸದೇ ಲೋಪ ಎಸಗುತ್ತಿರುವುದು ಲೋಕಾತಂಡದ ಕಾರ್ಯಾಚರಣೆ ವೇಳೆ ಕಂಡು ಬಂದಿದೆ ಎಂದು ಗೌರವಾನ್ವಿತ ಕರ್ನಾಟಕ ಲೋಕಾಯುಕ್ತರ ಕಾರ್ಯದರ್ಶಿಗಳಾದ ಶ್ರೀನಾಥ ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 7ರಂದು ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರಿಂದ ನಡೆದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಾ ತಂಡವು ಕಾರ್ಯಾಚರಣೆ ವೇಳೆ ಗಮನಿಸಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುತಿನ ಚೀಟಿ ಧರಿಸದೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಗ್ರೂಪ್ ಡಿ ಸೇರಿದಂತೆ ಬೇರೆ ಬೇರೆ ಸಿಬ್ಬಂದಿಗೆ ನಿಗದಿಪಡಿಸಿದ ಡ್ರೆಸ್ ಕೋಡ್ ಪಾಲನೆಯಾಗಿಲ್ಲ. ಕಚೇರಿಗೆ ಹೋದಾಗ ಯಾರು ಏನು ಎಂದು ಏನೂ ತಿಳಿಯುವುದಿಲ್ಲ. ಬಹುತೇಕ ಕಚೇರಿಗಳಲ್ಲಿ ನೇಮ್ ಪ್ಲೇಟ್ ಕಾಣಿಸಲಿಲ್ಲ. ಇದು ಕೂಡಲೇ ಸರಿಯಾಗಬೇಕು. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು ಎಂದು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಎಲ್ಲ ಕಚೇರಿಗಳಿಗೆ ಸುತ್ತೋಲೆ ರವಾನಿಸಿ ತಿಳಿಸಿದಾಗ್ಯೂ ಲೋಕಾಯುಕ್ತ ಅಧಿಕಾರಿಗಳ ಮಾಹಿತಿಯ ಫಲಕಗಳನ್ನು ಬಹುತೇಕ ಕಚೇರಿಗಳಲ್ಲಿ ಅಳವಡಿಸಿಲ್ಲ. ಸರ್ಕಾರಿ ನೌಕರರಿಗೆ ಅನ್ವಿಯಿಸುವ ಎಲ್ಲ ನಿಯಮಗಳು ಹೊರಗುತ್ತಿಗೆ ನೌಕರರಿಗು ಸಹ ಅನ್ವಯಿಸುತ್ತವೆ. ಆದಾಗ್ಯೂ ಹೊರಗುತ್ತಿಗೆ ನೌಕರರ ಹಾಜರಾತಿ ವಹಿಯನ್ನು ಬಹುತೇಕ ಕಚೇರಿಗಳಲ್ಲಿ ನಿರ್ವಹಣೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ತಪ್ಪಿತಸ್ಥ ಸರ್ಕಾರಿ ನೌಕರರ ಮೇಲೆ ಮೇಲೆ ಕ್ರಮವಹಿಸುವುದಷ್ಟೇ ನಮ್ಮ ಕೆಲಸವಲ್ಲ; ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದು ಸಹ ನಮ್ಮ ಕಾರ್ಯವಾಗಿದೆ. ಈ ದಿಶೆಯಲ್ಲಿ ತಂಡವು ಭೇಟಿ ನೀಡಿದ ವೇಳೆ ತಿಳಿಸಿದ ಅಂಶಗಳ ಬಗ್ಗೆ ಅರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿ ಅಂಶಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಜನವರಿ 2 ರಿಂದ ಜನವರಿ 7ರವರೆಗೆ ರಾಯಚೂರು ಜಿಲ್ಲೆಯ ವಿವಿಧೆಡೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕಂಡುಬಂದ ಲೋಪಗಳಿಗೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳಿಂದ ವರದಿ ಪಡೆದು ತಪ್ಪಿತಸ್ಥರ ಮೇಲೆ ವಿಚಾರಣೆಗೆ ಕ್ರಮವಹಿಸಲಾಗುವುದು. ಗಂಭೀರ ಪ್ರಕರಣ ಎಂದು ಕಂಡುಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಈಗ ಆಗಿರುವ ಲೋಪಗಳಿಗೆ ಸಂಬಂಧಿಸಿದಂತೆ ಯಾರಾದರು ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪು ಮಾಹಿತಿ ನೀಡಿದಲ್ಲಿ ಮತ್ತೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕರಿಂದ ಪರಿಶೀಲಿಸಿ ವರದಿ ಪಡೆದು ದೂರು ದಾಖಲಿಸುತ್ತೇವೆ ಎಂದು ತಿಳಿಸಿದರು.
ಸೂಕ್ತ ಮಾರ್ಗದರ್ಶನಕ್ಕೆ ವರದಿ: ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದಕ್ಕಾಗಿ, ಲೋಕಾ ತಂಡ ಭೇಟಿ ನೀಡಿ ಪರಿಶೀಲಿಸಿ ಪಟ್ಟಿ ಮಾಡಿದ ಲೋಪದೋಷಗಳ ಅಂಶಗಳ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ಕಾರ್ಯದರ್ಶಿಗಳು ತಿಳಿಸಿದರು.
ನಮ್ಮ ಹಂತದಲ್ಲೇ ಕ್ರಮ: ಬೇರೆ ಬೇರೆ ಇಲಾಖೆಗಳಲ್ಲಿನ ಲೋಪದ ಬಗ್ಗೆ ಲೋಕಾಯುಕ್ತರು ನೀಡಿದ ಪಟ್ಟಿಯ ಮೇಲೆ ತಾವು ತಮ್ಮ ಹಂತದಲ್ಲಿ ಆಗುವುದನ್ನು ತ್ವರಿತವಾಗಿ ಸರಿಪಡಿಸುವುದಾಗಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದರು. ಶುದ್ಧ ಕುಡಿವ ನೀರಿನ ಘಟಕಗಳ ದುರಸ್ಥಿಗೆ ಹೆಚ್ಚಿನ ಒತ್ತು ಕೊಡುವುದಾಗಿ ಅವರು ಹೇಳಿದರು. ಮುಂದಿನ ವಾರ ಎಲ್ಲ ಅಧಿಕಾರಿಗಳ ಸಭೆ ಕರೆದು ಪುನಃ ಚರ್ಚಿಸುವುದಾಗಿ ತಿಳಿಸಿದರು.
ಇಲ್ಲಿಗೆ ಮುಗಿಯುವುದಿಲ್ಲ: ಲೋಕಾಯುಕ್ತ ಭೇಟಿಯ ಬಿಸಿ ಇಲ್ಲಿಗೆ ಮುಗಿಯುವುದಿಲ್ಲ. ತಪ್ಪಿತಸ್ಥರಿಗೆ ಇನ್ಮುಂದೆ ನೊಟೀಸ್ ಬರುತ್ತವೆ. ಅಧಿಕಾರಿಗಳು ನೊಟೀಸಗಳನ್ನು ಹಗುರವಾಗಿ ಪರಿಗಣಿಸದೇ ಕೂಡಲೇ ಉತ್ತರ ನೀಡಬೇಕು. ಪ್ರಕರಣ ಗಂಭೀರ ಸ್ವರೂಪ ಹೊಂದಿದ್ದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಎ.ವಿ.ಪಾಟೀಲ, ರಾಯಚೂರು ಜಿಲ್ಲಾ ಕರ್ನಾಟಕ ಲೋಕಾಯುಕ್ತದ ಅಧೀಕ್ಷಕರಾದ ಸತೀಶ್ ಎಸ್ ಚಿಟಗುಬ್ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಕ್ಷ ಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಲೋಕಾಯುಕ್ತದ ಡಿವೈಎಸ್ಪಿ ರವಿ ಪುರುಷೋತ್ತಮ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸ್ವಾಗತಿಸಿದರು.

Leave a Reply

Your email address will not be published. Required fields are marked *