ಮಾನ್ವಿ : ಪಟ್ಟಣದ ಆರಾಧ್ಯ ದೈವ, ಗ್ರಾಮದೇವತೆ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಮಹಾರಥೋತ್ಸವವು ಸೋಮವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು. ನಂತರ ಹೂವುಗಳಿಂದ ಮನೋಹರವಾಗಿ ಅಲಂಕೃತಗೊಂಡ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ತರಳಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಸಂಜೆಯ ಹೊತ್ತಿಗೆ ಮಂಗಳವಾದ್ಯಗಳ ಘೋಷದ ನಡುವೆ ಸಾವಿರಾರು ಭಕ್ತರು “ಚೌಡಮ್ಮ ತಾಯಿಗೆ ಜೈ” ಎಂದು ಜಯಘೋಷ ಮೊಳಗಿಸುತ್ತಾ ಭಕ್ತಿ-ಭಾವದಿಂದ ತೇರನ್ನು ಎಳೆದರು. ಭಕ್ತರ ಅಪಾರ ಜಯಕಾರದ ಮಧ್ಯೆ ರಥವು ನಿಗದಿತ ಮಾರ್ಗದಲ್ಲಿ ಸಂಚರಿಸಿ ಸ್ವಸ್ಥಾನ ಸೇರಿದಾಗ ನೆರೆದಿದ್ದ ಜನಸ್ತೋಮ ಹರ್ಷೋದ್ಗಾರ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಭಕ್ತರು ರಥಕ್ಕೆ ಬಾಳೆಹಣ್ಣು ಹಾಗೂ ಉತ್ತುತ್ತಿ ಎಸೆದು ತಮ್ಮ ಹರಕೆಗಳನ್ನು ತೀರಿಸಿದರು.
ರಥೋತ್ಸವದ ಅಂಗವಾಗಿ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶವನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿದ್ದು, ಸಂಪೂರ್ಣ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು.

Leave a Reply

Your email address will not be published. Required fields are marked *