ಮಾನ್ವಿ : ತಾಲ್ಲೂಕಿನ ಚಿಕ್ಕಸೂಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನಗಳ ಸ್ಥಳದಲ್ಲೇ ಉದ್ಯಾನವನ ನಿರ್ಮಿಸಲು ಉದ್ದೇಶಿಸಿರುವ ಕ್ರಮವನ್ನು ತಕ್ಷಣ ತಡೆಹಿಡಿದು, ಗ್ರಾಮದ ಬಹುಮುಖ್ಯ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿರಾದ ಡಾ. ಜಾವೀದ್ ಖಾನ್ ಆಗ್ರಹಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಮಾತನಾಡಿದ ಅವರು, ಚಿಕ್ಕಸೂಗೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ವಿಶೇಷವಾಗಿ ಪರಿಶಿಷ್ಟ ಜಾತಿ ವಸತಿ ಪ್ರದೇಶಗಳಲ್ಲಿ ಸಮಸ್ಯೆಗಳು ತೀವ್ರವಾಗಿವೆ ಎಂದರು. ಸುರ್ವಣ ಕಾಲೋನಿಯಿಂದ ಪರಿಶಿಷ್ಟ ಜಾತಿ ಏರಿಯಾ ಮೂಲಕ ಸ್ಮಶಾನದ ರಸ್ತೆಯವರೆಗೆ ರಾಜ್ ಕಾಲುವೆ ನಿರ್ಮಾಣ, ಸಂಗಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪರಿಶಿಷ್ಟ ಜಾತಿ ಏರಿಯಾದಲ್ಲಿ ಚರಂಡಿ ನಿರ್ಮಾಣ, ಪ.ಜಾತಿಯ ಜನತಾ ಕಾಲೋನಿಯಿಂದ ಹೈದರಾಬಾದ್ ಮುಖ್ಯ ರಸ್ತೆಗೆ ಮೂರು ಸಂಪರ್ಕ ರಸ್ತೆ ನಿರ್ಮಾಣ, ಶ್ರೀ ಆಂಜಿನಯ್ಯ ದೇವಸ್ಥಾನದ ಪಕ್ಕದಲ್ಲಿ ಹಾದು ಹೋಗುವ ರಾಜ್ ಕಾಲುವೆಯ ನೂತನ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಅತ್ಯವಶ್ಯಕವಾಗಿವೆ ಎಂದು ವಿವರಿಸಿದರು.
ನಂತರ ಮಾತನಾಡಿದ ದಲಿತ ಸೇನೆ ಜಿಲ್ಲಾಧ್ಯಕ್ಷರಾದ ಮಾರುತಿ ಚಿಕ್ಕಸೂಗೂರು, ವತ್ತೂರು ಕ್ರಾಸ್‌ನಲ್ಲಿ ಅತಿಕ್ರಮಣಗೊಂಡಿರುವ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೈಟೆಕ್ ಶೌಚಾಲಯ ಹಾಗೂ ಉತ್ತಮ ಬಸ್ ನಿಲ್ದಾಣ ಕಟ್ಟಡ ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು. ಇಷ್ಟೊಂದು ತುರ್ತು ಸಮಸ್ಯೆಗಳು ಇದ್ದರೂ, ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಮೇಲಾಧಿಕಾರಿಗಳ ಆದೇಶವಿದೆ ಎಂದು ಹೇಳಿಕೊಂಡು ನಿವೇಶನಗಳಲ್ಲಿ ಉದ್ಯಾನವನ ನಿರ್ಮಿಸಲು ಮುಂದಾಗಿರುವುದು ಕಾನೂನುಬಾಹಿರ ಕ್ರಮವಾಗಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಚಿಕ್ಕಸೂಗೂರು ಪಂಚಾಯತಿಗೆ ಈಗಾಗಲೇ ಮಂಜೂರಾಗಿರುವ ಸುಮಾರು ನಾಲ್ಕು ಕೋಟಿ ಆರುವತ್ತು ಲಕ್ಷ ರೂಪಾಯಿ ಅನುದಾನವನ್ನು ಉದ್ಯಾನವನಕ್ಕೆ ಬಳಸದೆ, ಮೇಲ್ಕಂಡ ಅಗತ್ಯ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತವು ಸ್ಪಷ್ಟ ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುರೇಶ್ ಬಾಬು, ಬಾಬು, ಕೃಷ್ಣ ಮಾರ್ಷಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

