ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿರುವ ಅಂಬಾಮಠ ನಮ್ಮ ರಾಜ್ಯ ಅಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರನ್ನ ಸೆಳೆಯುತ್ತಿದ್ದು ಬಹು ವಿಜೃಂಭಣೆಯಿಂದ ಜಾತ್ರೆಯು ನಡೆಯುತ್ತಿದೆ.

ಐತಿಹಾಸಿಕ ಹಿನ್ನೆಲೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದಲ್ಲಿನ ಅಂಬಾದೇವಿ ದೇವಸ್ಥಾನಕ್ಕೆ 343ವರ್ಷಗಳ ಇತಿಹಾಸವಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಹಾಗೂ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಗುಡ್ಡ-ಗಾಡು ದಟ್ಟ ಅರಣ್ಯ ಪ್ರದೇಶವಾಗಿದ್ದ ಅಂಬಾಮಠ ಬೆಳೆದು ಬಂದಿದ್ದಕ್ಕೆ ದೊಡ್ಡ ಇತಿಹಾಸವಿದೆ.
1876ರಲ್ಲಿ ಆದೋನಿ ಜಿಲ್ಲೆಯ ಹಿರೇಹರಿವಾಣದಲ್ಲಿ ಜನಿಸಿದ್ದ ಚಿದಾನಂದ ಅವಧೂತರು ಬಾಲ್ಯದಲ್ಲಿಯೇ ದೇವಿಯ ದರ್ಶನ ಪಡೆಯುತ್ತಾ ಸಾಮಾನ್ಯ ಪಂಚಾಂಗ ಹೇಳುವ ಕುಟುಂಬದಲ್ಲಿ ಜನಿಸಿದ್ದ ಅವಧೂತರಿಗೆ ಬಡತನ ಕಾಡುತ್ತದೆ. ಊರ ಹೊರಗೆ ಆ ಊರಿನ ಗೌಡ ಕಟ್ಟಿಸಿದ್ದ ಮನೆಯಲ್ಲಿ ಪಿಶಾಚಿ ಇದೆ ಎಂದು ಮನೆ ತ್ಯಜಿಸಿರುತ್ತಾರೆ. ಆ ಮನೆಯಲ್ಲಿ ಅವಧೂತರು ತಂದೆ, ತಾಯಿಯೊಂದಿಗೆ ವಾಸ ಮಾಡುತ್ತಾರೆ. ಮನೆಯ ಇಷ್ಟ ದೈವ ವೀರನಾರಾಯಣನಿಗೆ ಪೂಜೆ ಸಲ್ಲಿಸಲು ತಂದೆ ಹೋಗುವಾಗ ಕರಿಗೆಡಬು, ತುಪ್ಪ ಮತ್ತು ಇತರ ನೈವೇದ್ಯದ ಅಡುಗೆ ಮುಟ್ಟಬಾರದು ಎಂದು ಚಿದಾನಂದ ಅವಧೂತರನ್ನು ಕಂಬಕ್ಕೆ ಕಟ್ಟಿ ಹಾಕಿ ಹೋಗಿರುತ್ತಾರೆ. ಈ ವೇಳೆ ತಾಯಿಯ ರೂಪದಲ್ಲಿ ಪ್ರತ್ಯಕ್ಷಳಾದ ಅಂಬಾದೇವಿ ಅವಧೂತರನ್ನು ಬಂಧನದಿಂದ ಬಿಚ್ಚಿ ಊಟ ಮಾಡಿಸುತ್ತಾಳೆ. ನೀರು ತರುವೆ ಎಂದು ಹೊರ ಹೋಗುತ್ತಾಳೆ. ಮನೆಯವರು ಬಂದಾಗ ಊಟ ಮಾಡುವುದನ್ನು ಕಂಡು ಗಾಬರಿಯಾಗುತ್ತಾರೆ. ದೇವರಿಗೆ ಎಡೆ ಮಾಡುವ ಮುನ್ನ ಊಟ ಮಾಡಿದ್ದಕ್ಕೆ ಬಾಲ ಚಿದಾನಂದರಿಗೆ ಬೈಯ್ಯುತ್ತಾರೆ. ಆದರೆ ನೀನೇ ನನಗೆ ಊಟ ನೀಡಿದ್ದು, ಬೇಕಿದ್ದರೆ ತುಪ್ಪದಲ್ಲಿ ನಿನ್ನ ಬೆರಳು ಮೂಡಿದ್ದನ್ನು ನೋಡು ಎಂದು ಅಳುತ್ತಾನೆ. ಇದು ದೇವಿ ಮಹಿಮೆ ಇದೆ ಎಂದು ಆ ಬಾಲಕನಿಗೆ ಹೊಡೆಯುವುದನ್ನೇ ಬಿಡುತ್ತಾರೆ.

ಅಲ್ಲಿಂದ ಗಂಗಾವತಿ ತಾಲೂಕಿನ ಹೆಬ್ಬಾಳಕ್ಕೆ ಕೂಲಿ ಮಾಡಲು ಕುಟುಂಬ ಸಮೇತ ಬರುತ್ತಾರೆ. ಆಗ ತುಂಗಭದ್ರಾ ನದಿ ದಂಡೆಯಲ್ಲಿನ ಹೊನ್ನಪ್ಪ ಎನ್ನುವ ವಿದ್ವಾಂಸರ ಬಳಿ ಈತನಿಗೆ ವಿದ್ಯೆ ಕಲಿಕೆಗೆ ಬಿಡುತ್ತಾರೆ. ವಿದ್ಯೆ ಕಲಿತ ಬಳಿಕ ಸಿಂಧನೂರು ತಾಲೂಕಿನ ರವುಡಕುಂದಾ ಬಳಿಯ ರಂಗನಾಥ ದೇವಸ್ಥಾನಕ್ಕೆ ಬಂದು ಗವಿಯೊಳಗೆ 9 ದಿನ ದ್ಯಾನ ಮಾಡುತ್ತಾರೆ. ಇಲ್ಲೂ ಮನಸ್ಸು ಪ್ರಶಾಂತವಾಗದ ಕಾರಣ ಕಾಡು ಅರಣ್ಯವಾಗಿದ್ದ ಸೋಮಲಾಪುರ ಗುಡ್ಡಕ್ಕೆ ಬಂದು ಗವಿಯೊಳಗೆ ತಪಸ್ಸು ಮಾಡುತ್ತಾರೆ. ದೇವಿ ಆರಾಧನೆ ಮಾಡುತ್ತ ಬಹು ದಿನ ಕಾಲ ಕಳೆದಾಗ ದೇವಿ ಪ್ರತ್ಯಕ್ಷಳಾಗಿ ಬೇಡಿಕೆ ಆಲಿಸುತ್ತಾಳೆ. “ಈ ಭಾಗದಲ್ಲಿ ಆರಾಧ್ಯ ದೈವವಾಗಿ ಬೇಡಿದ್ದವರಿಗೆ ವರವ ನೀಡುವ ಮಹಿಮಾ ಪುರುಷಳಾಗಬೇಕು” ಎಂದು ಕೋರಿಕೊಳ್ಳುತ್ತಾನೆ. ಆದರೆ ತನಗೇನೂ ಬೇಡದ ಚಿದಾನಂದ ಯತಿಗಳ ಬೇಡಿಕೆ ಮೇರೆಗೆ ಅಂಬಾದೇವಿ ಮೂರ್ತಿ ಉದ್ಭವವಾಗುತ್ತದೆ. ನೂರಾರು ಜನರು ಕೈ ಮುಗಿಯುತ್ತಾ ಪೂಜೆ-ಪುನಸ್ಕಾರ ಮಾಡುತ್ತಾರೆ. ಕ್ರಮೇಣವಾಗಿ ಅರಣ್ಯ ಪ್ರದೇಶದಲ್ಲಿದ್ದ ದೇವಸ್ಥಾನ ದೊಡ್ಡದಾಗುತ್ತದೆ. ಅಂಬಾಮಠವಾಗಿ ಬೆಳೆಯುತ್ತದೆ. ಇಂತಹ ಮಠ ಈಗ ಲಕ್ಷಾಂತರ ಭಕ್ತರ ತಾಣವಾಗಿದೆ. ಪ್ರತಿ ವರ್ಷ ದಸರಾ ವೇಳೆ ಶರನ್ನವರಾತ್ರಿ ಉತ್ಸವ ನಡೆದರೆ, ಬನದ ಹುಣ್ಣಿಮೆಯಂದು ದೇವಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ, ಮಂಗಳವಾರ, ಶುಕ್ರವಾರ ದೇವಿ ಸನ್ನಿಧಾನದಲ್ಲಿ ಸಾವಿರಾರು ಭಕ್ತರು ದರ್ಶನ ಪಡೆಯುತ್ತಾರೆ.

“ಭಕ್ತರ ಭಕ್ತಿ ಸಾಗರ ಅಂಬಾ ಮಠ”:
ಅಂಬಾ ಮಠ ಹೀಗೆ ತನ್ನದೇ ಆದ ಇತಿಹಾಸವನ್ನು ಹೊಂದಿ ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಜಾತಿ, ಮತ ಎನ್ನದೆ ಬೇಧ ಭಾವವಿಲ್ಲದೆ ಸರ್ವರು ಸಮಾನವಾಗಿ ಭಾವೈಕ್ಯತೆಯ ಪ್ರತೀಕವಾಗಿ, ಸಂಸ್ಕೃತಿಯ ಪ್ರತೀಕವಾಗಿ ಅಂಬಾದೇವಿ ಜಾತ್ರೆಯು ನಡೆಯುತ್ತದೆ. ಆದ್ದರಿಂದ ಹಲವಾರು ಭಕ್ತರನ್ನ ಸೆಳೆದು ಭಕ್ತರ ಭಕ್ತಿಯು ಸಾಗರದಷ್ಟು ಬೆಳೆದು
“ಭಕ್ತರ ಭಕ್ತಿ ಸಾಗರ”ವಾಗಿದೆ ಅಂಬಾ ಮಠ.

ಸುಭಾಸ ಹರ್ವಾಪೂರ ಉಪನ್ಯಾಸಕರು ಹಾಗೂ ಪತ್ರಕರ್ತರು ಸಿಂಧನೂರು.

Leave a Reply

Your email address will not be published. Required fields are marked *