ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಉದ್ಭವ ಆಂಜನೇಯ್ಯ ಎಪಿಎಂಸಿ ಹಮಾಲರ ಸಂಘ–ಮಾನ್ವಿ (ಎಐಟಿಯುಸಿ) ಸಂಯೋಜಿತ ಕಾರ್ಯಧ್ಯಕ್ಷ ಎಂ.ಬಿ. ಸಿದ್ರಾಮಯ್ಯಸ್ವಾಮಿ ಮಾತನಾಡಿ ಮಾಹಿತಿಯನ್ನು ನೀಡಿದರು.
ಮಾನ್ವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ಹಮಾಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಹಮಾಲಿಗಳಿಗೆ ತಮ್ಮದೇ ಸ್ವಂತ ಮನೆ ಹೊಂದುವ ಅವಕಾಶ ಕಲ್ಪಿಸುವ ಉದ್ದೇಶದಿಂದ 2004-05ರಲ್ಲಿ ಅಂದಿನ ಎಪಿಎಂಸಿ ಅಧ್ಯಕ್ಷರಾಗಿದ್ದ ಹಾಗೂ ಹಾಲಿ ಶಾಸಕ ಹಂಪಯ್ಯನಾಯಕರವರು ಪಟ್ಟಣದ ಹೊರವಲಯ ಮುಸ್ಟೂರು ರಸ್ತೆಯಲ್ಲಿ 10 ಎಕರೆ 27 ಗುಂಟೆ ಜಮೀನು ಖರೀದಿ ಮಾಡಿದ್ದರು. ಇದರಲ್ಲಿ ಹಮಾಲಿಗಳಿಗಾಗಿ 2 ಎಕರೆ 25 ಗುಂಟೆ ಜಮೀನಿನಲ್ಲಿ 120 ನಿವೇಶನಗಳನ್ನು ರಚಿಸಲಾಗಿತ್ತು. ಅದೇ ಜಾಗದಲ್ಲಿ ರೈತರಿಗೆ ಅಗತ್ಯವಿರುವ ಜಾನುವಾರು ಮಾರುಕಟ್ಟೆ ಹಾಗೂ ಗುದಾಮು ನಿರ್ಮಾಣಕ್ಕೂ ವ್ಯವಸ್ಥೆ ಮಾಡಲಾಗಿತ್ತು.
ಆದಾಗ್ಯೂ, ವಿವಿಧ ಕಾರಣಗಳಿಂದ ಇಷ್ಟು ವರ್ಷ ಹಮಾಲಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಹಂಪಯ್ಯನಾಯಕ, ಸಚಿವ ಎನ್.ಎಸ್. ಬೋಸರಾಜು ಹಾಗೂ ಎಪಿಎಂಸಿ ಉನ್ನತಾಧಿಕಾರಿಗಳಿಗೆ ಸಂಘವು ಹಲವು ಬಾರಿ ಮನವಿ ಸಲ್ಲಿಸಿತ್ತು. ನಂತರ ನ. 20ರಂದು ಮಾನ್ವಿ ಎಪಿಎಂಸಿ ಸಭೆಯಲ್ಲಿ ವಿವಿಧ ನಿಯಮ-ನಿಬಂಧನೆಗಳ ಪರಿಶೀಲನೆಯ ನಂತರ 73 ನಿವೇಶನಗಳನ್ನು ಹಮಾಲಿಗಳಿಗೆ ಹಂಚಿಕೆ ಮಾಡುವಂತೆ ಅಧಿಕೃತ ಆದೇಶ ಹೊರಬಿದ್ದಿದೆ.
ಈ ಹಿನ್ನೆಲೆಯಲ್ಲಿ ಜ. 9ರಂದು ಮಾನ್ವಿ ಎಪಿಎಂಸಿ ಆವರಣದಲ್ಲಿ ಸಚಿವ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯನಾಯಕರವರು ಹಮಾಲಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ. ನಿವೇಶನ ಹಂಚಿಕೆಗೆ ಸಹಕಾರ ನೀಡಿದ ಸಚಿವರು, ಶಾಸಕ ಹಾಗೂ ಎಪಿಎಂಸಿ ಕಾರ್ಯದರ್ಶಿಯನ್ನು ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಸನ್ಮಾನಿಸುವುದಾಗಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಉದ್ಭವ ಆಂಜನೇಯ್ಯ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಹನುಮಂತ, ಖಜಾಂಚಿ ರಾಮಣ್ಣ, ಹಮಾಲಿ ಕಾರ್ಮಿಕರಾದ ಫಕೀರಯ್ಯ, ಬಾಷ, ಹಂಪಯ್ಯ, ಶರಣಪ್ಪ, ಕೊಂಡಯ್ಯ, ವೀರೇಶ, ಫಕೃದ್ದಿನ್, ದೇವ, ಜಂಬಯ್ಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

