ರಾಯಚೂರು ಜನವರಿ 04 (ಕ.ವಾ.): ರಾಯಚೂರಿನ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಕಿದ್ವಾಯಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ನಿರ್ಮಿಸುವ ಅಂದಾಜು ಮೊತ್ತ 2000 ಲಕ್ಷ ರೂ ಮೊತ್ತದ ಕಟ್ಟಡ ಕಾಮಗಾರಿಗೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಎನ್ ಎಸ್ ಬೋಸರಾಜು ಅವರು ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲಾಡಳಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ರಿಮ್ಸ್ ಇವರ ಸಹಯೋಗದಲ್ಲಿ ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಜನವರಿ 4ರಂದು ನಡೆದ ಕಾರ್ಯಕ್ರಮದಲ್ಲಿ, ಅಂದಾಜು ಮೊತ್ತ 450.00 ಲಕ್ಷ ರೂ.ಗಳ ವೆಚ್ಚದಲ್ಲಿ ರಾಯಚೂರು ನಗರದ ರಿಮ್ಸ್ ಸಂಸ್ಥೆಯ ಆವರಣದಲ್ಲಿ ನಿರ್ಮಾಣಗೊಂಡ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡವನ್ನು ಸಹ ಇದೆ ವೇಳೆ ಸಚಿವರು ಉದ್ಘಾಟಿಸಿದರು.
ಈ ವೇಳೆ ಸಚಿವರಾದ ಎನ್ ಎಸ್ ಬೋಸರಾಜು ಮಾತನಾಡಿ, ಈ ಕೇಂದ್ರವು ರಾಯಚೂರಲ್ಲಿ ಆಗಬೇಕು ಎಂಬುದು ನಮ್ಮ ಬಹುದಿನಗಳ ಅಪೇಕ್ಷೆಯಾಗಿತ್ತು. ಆ ಕನಸು ಈಗ ಸಾಕಾರವಾಗಿದೆ. ಡಾ.ಶರಣಪ್ರಕಾಶ ಪಾಟೀಲ ಅವರು ವೈದ್ಯಕೀಯ ಇಲಾಖೆಯ ಸಚಿವರಾಗಿದ್ದರಿಂದಾಗಿ ನಮ್ಮಲ್ಲಿ ಈ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ ಎಂದು ತಿಳಿಸಿದರು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ರಾಯಚೂರಿನ ಒಪೆಕ್ ಆಸ್ಪತ್ರೆ ಎಲ್ಲ ವಿಭಾಗಗಳು ಉತ್ತಮವಾಗಿದೆ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಜಿಲ್ಲೆಯ ಜನತೆಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ರಾಯಚೂರಿಗೆ ಟ್ರಾಮಾ ಕೇರ್ ಸೆಂಟರ್ ನಿರ್ಮಾಣ ಹಾಗೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಈಗಾಗಲೇ ಟ್ರಾಮಾ ಸೆಂಟರ್ ನಿರ್ಮಾಣವಾಗಿದೆ. ಇದೀಗ ಮೊದಲನೇ ಹಂತದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಒಪೆಕ್ ಆಸ್ಪತ್ರೆ ಆವರಣದಲ್ಲಿನ ಎಲ್ಲ ರಸ್ತೆಗಳನ್ನು ಸರಿಪಡಿಸಲಾಗಿದೆ. ಇಂತಹ ಅಭಿವೃದ್ದಿ ಕಾರ್ಯಗಳು ನಿರಂತರ ನಡೆಯುತ್ತಿವೆ ಎಂದು ತಿಳಿಸಿದರು.
ಬಡ ಮಕ್ಕಳಿಗೆ ಸಹ ವೈದ್ಯಕೀಯ ಶಿಕ್ಷಣ ಸಿಗಬೇಕು ಎಂದು ಆಲೋಚಿಸಿ ನಾವು ಈಗಾಗಲೇ ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಿದ್ದೇವೆ. ಈ ಬಾರಿಯ ಬಜೆಟನಲ್ಲಿ ಮತ್ತೆ 3 ಮೆಡಿಕಲ್ ಕಾಲೇಜ್ ನಿರ್ಮಾಣದ ಘೋಷಣೆ ಮಾಡಿದ್ದೇವೆ ಎಂದರು.
ಯುನಿವರ್ಸಲ್ ಹೆಲ್ತ್ ಕವರೇಜ್ ದೂರದೃಷ್ಟಿಯ ವಿಚಾರದಡಿಯಲ್ಲಿ ನಾವು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಂತ ಕಾರ್ಯ ಯೋಜನೆ ಹೊಂದಿದ್ದೇವೆ ಎಂದು ಸಚಿವರು ತಿಳಿಸಿದರು.
ಅಜಿಂ ಪ್ರೇಮಜಿ ಅವರ ಸಹಯೋಗದಲ್ಲಿ ಒಂದು ವಿಶೇಷ ಆಸ್ಪತ್ರೆಯನ್ನು ಮುಂದಿನ ಮೂರು ವರ್ಷದೊಳಗೆ ನಿರ್ಮಾಣ ಮಾಡಲು ಯೋಜಿಸಲಾಗಿದೆ. ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿದೆ. ಜನತೆ ಆರೋಗ್ಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಯಚೂರು ಜಿಲ್ಲೆಯ ಜನತೆಯಲ್ಲಿ ಸಚಿವರು ಮನವಿ ಮಾಡಿದರು.
ಸಮಾರಂಭದಲ್ಲಿ ಶಾಸಕರಾದ ಬಸನಗೌಡ ದದ್ದಲ್, ಎ ವಸಂತಕುಮಾರ, ಮುಖಂಡರಾದ ಪವನ ಕಿಶೋರ ಪಾಟೀಲ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಎಸ್ಪಿ ಅರುಣಾಂಕ್ಷು ಗಿರಿ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕರಾದ ಡಾ.ನವೀನ್ ಟಿ., ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಿಮ್ಸ್ ನಿರ್ದೇಶಕರಾದ ಡಾ.ರಮೇಶ ಬಿ ಎಚ್., ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ.ರಮೇಶ ಸಿ ಸಾಗರ, ರಿಮ್ಸ್ ನ ಮುಖ್ಯ ಆಡಳಿತಾಧಿಕಾರಿ ಡಾ.ಗುರುಸಿದ್ದಯ್ಯ, ಆರ್ಥಿಕ ಅಧಿಕಾರಿ ಚನ್ನಮ್ಮ, ಡಿಎಚ್‌ಓ ಡಾ.ಸುರೇಂದ್ರಬಾಬು ಹಾಗು ಇತರರು ಇದ್ದರು. ಡಾ.ದಂಡಪ್ಪ ಬಿರಾದಾರ ನಿರೂಪಿಸಿದರು. ಡಾ.ಡಾ.ಡಿ.ಮಂಡೋಲಿಕರ ವಂದಿಸಿದರು.



