ದೇವದುರ್ಗ:ಡಿ.1-ತಾಲೂಕಿನ ಪ್ರತಿಯೊಂದು ಹಳ್ಳಿಗೂ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ದೇವದುರ್ಗ ಘಟಕಕ್ಕೆ 20ಹೊಸ ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.ಪಟ್ಟಣದ ಬಸ್ ಡಿಫೋದಲ್ಲಿದೇವದುರ್ಗ-ಪುಣೆ ಬಸ್ ಸಂಚಾರಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. 20ಹೊಸ ಜತೆಗೆ ಎರಡು ಸ್ವೀಪರ್‌ಬಸ್ ನೀಡಲು ಮನವಿ ಮಾಡಿದ್ದೇನೆ. ಭಕ್ತರ ಒತ್ತಾಯದ ಮೇರೆಗೆ ಧರ್ಮಸ್ಥಳ, ಧಾರವಾಡ ಸೇರಿ ವಿವಿಧೆಡೆ ಹೊಸಮಾರ್ಗದಲ್ಲಿ ಬಸ್ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ದೇವದುರ್ಗ ತಿರುಪತಿಗೆ ಬಸ್ ಸಂಚಾರ ಆರಂಭಿಸಲಾಗುವುದು.ಪುಣೆ, ಗೋವಾಗೆ ಬಂಜಾರ ಸಮುದಾಯದ ಜನರು ಹೆಚ್ಚಾಗಿ ಹೋಗುತ್ತಿದ್ದು ಬಸ್ ಇಲ್ಲದೆ ಅವರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ದೇವದುರ್ಗ ಪುಣೆ ಬಸ್ ಸಂಚಾರ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿ, ತಾಂಡಾಕ್ಕೂಬಸ್ ಓಡಿಸಲಾಗುವುದು.ಹೀಗಾಗಿ
ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು, ರೈತರ ಅನುಕೂಲಕ್ಕಾಗಿ ಎಲ್ಲ ಹಳ್ಳಿಗೂ ಬಸ್ ಬಿಡಲಾಗುವುದು. ಜನರು ಸಾರಿಗೆ ನೌಕರರಿಗೆ ಸಹಕಾರ ನೀಡಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಡಿಫೋ ಮ್ಯಾನೇಜರ್ ರಾಮನಗೌಡ ಮಾತನಾಡಿ, ಶಕ್ತಿ ಯೋಜನೆಯಿಂದ ಪುಣೆಗೆ ಹೋಗುತ್ತಿದ್ದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಪ್ರತಿಕಿಮೀ ಬಸ್ ಓಡಿಸಲು 40ರೂ. ಖರ್ಚು ಬರಲಿದೆ. ಆದರೆ ಈರೂಟ್‌ನಲ್ಲಿ 29-30ಸಂಗ್ರಹವಾಗಿ 10ರೂ. ಹೆಚ್ಚುವರಿ ಬೀಳುತ್ತಿತ್ತು. ಹೀಗಾಗಿ ಪುಣೆ ರೂಟ್ ಬಂದ್ ಮಾಡಲಾಗಿತ್ತು. ಧರ್ಮಸ್ಥಳ ರೂಟ್ 50ರೂ. ಆದಾಯ ತರುತ್ತಿದೆ. ಕೆಲವು ಕಡೆಲಾಭವಿಲ್ಲದಿದ್ದರೂ ರೂಟ್ ಪಾಲಿಸಲು ಬಸ್ ಓಡಿಸಲಾಗುತ್ತಿದೆ. ಜನರು ಸುರಕ್ಷಿತ ಪ್ರಯಾಣಕ್ಕೆ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಸಬೇಕು ಎಂದರು. ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ಶರಣಪ್ಪ ಬಳೆ, ಪ್ರಮುಖರಾದ ದೊಡ್ಡರಂಗಣ್ಣ ಪಾಟೀಲ್ ಅಳ್ಳುಂಡಿ, ಶೀಖರೇಶ ಪಾಟೀಲ್, ಕೃಷ್ಣಪ್ಪ ನಾಯಕ, ಅಯ್ಯಣ್ಣ, ನಾಗರಾಜ ಪಾಟೀಲ್, ಮಹಾದೇವಪ್ಪಗೌಡ ಹಿರೇಬೂದೂರು, ಗೌರಿ ಜಿ.ನಾಯಕ ಇತರರಿದ್ದರು.

