ರಾಯಚೂರು ಜನವರಿ 23 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಫೆ.5ರಿಂದ ಫೆ.7ರವರೆಗೆ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಪ್ರಚಾರಾರ್ಥ ಜನವರಿ 23ರಂದು ಸಹಿ ಅಭಿಯಾನ ಆರಂಭಗೊಂಡಿತು.
ರಾಯಚೂರು ಸಿಟಿಯ ಎಲ್ ವಿಡಿ ಕಾಲೇಜಿನ ಹತ್ತಿರ ಇರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ ನಡೆದ ಸಹಿ ಅಭಿಯಾನಕ್ಕೆ ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾಣಿ ಅವರು ಚಾಲನೆ ನೀಡಿದರು.
ಈ ವೇಳೆ, ಸಂತೋಷರಾಣಿ ಅವರು ಮಾತನಾಡಿ, ರಾಯಚೂರು ಉತ್ಸವದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಕ್ರಿಯ ಭಾಗಿಯಾಗಬೇಕು. ಈ ಸಂಬಂಧ ವ್ಯಾಪಕವಾಗಿ ಜನತೆಗೆ ಮಾಹಿತಿ ರವಾನಿಸಲು ಸಹಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ ಅವರು ಮಾತನಾಡಿ, ಇದು ನಮ್ಮೂರ ಉತ್ಸವ ಎಂದು ಭಾವಿಸಿ ವಿದ್ಯಾರ್ಥಿಗಳೊಂದಿಗೆ ತಪ್ಪದೇ ಭಾಗಿಯಾಗುವುದಾಗಿ ತಿಳಿಸಿದರು.
ಪ್ರಚಾರ ಸಮಿತಿಯ ಸದಸ್ಯ ಕಾರ್ಯದರ್ಶಿ ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ಬಹುವರ್ಷಗಳ ನಂತರ ರಾಯಚೂರು ಉತ್ಸವ ನಿಗದಿಯಾಗಿದೆ. ಉತ್ಸವದಲ್ಲಿ ಕೃಷಿ ಮೇಳ, ಮತ್ಸ್ಯಮೇಳ, ಫಲಪುಷ್ಪ ಪ್ರದರ್ಶನ ಸೇರಿದಂತೆ ನಾನಾ ಕಾರ್ಯಕ್ರಮಗಳು ಮತ್ತು ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ಪ್ರತಿ ದಿನ ಹಾಡು, ನೃತ್ಯ ಸೇರಿದಂತೆ ಅದ್ದೂರಿ ಕಾರ್ಯಕ್ರಮಗಳು ನಡೆಯಲಿವೆ. ವೆಬ್ ಸೈಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕಾರ್ಯ ನಡೆಸಿದ್ದು ವಿದ್ಯಾರ್ಥಿಗಳು ತಪ್ಪದೆ ಹಾಜರಾಗಬೇಕು ಎಂದು ಮನವಿ ಮೂಡಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಸದಸ್ಯರಾದ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸದಾಶಿವಪ್ಪ, ಪಾಲಿಕೆಯ ಅಧಿಕಾರಿಗಳಾದ ಕೃಷ್ಣ ಕಟ್ಟಿಮನಿ, ಅರಣ್ಯ ಇಲಾಖೆಯ ನಾಗರಾಜ್, ಗ್ರಂಥಾಲಯ ಇಲಾಖೆಯ ಮರೆಪ್ಪ, ರಾಜ್ಯ ಸರ್ಕಾರಿ ನೌಕರರ ವಿಮಾ ಇಲಾಖೆಯ ವಿಕ್ರಾಂತ ಇನ್ನೀತರ ಸದಸ್ಯರು ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.


